ರಾಷ್ಟ್ರೀಯ

ಉತ್ತರಪ್ರದೇಶದ ಕಾನ್ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೈ ಕೊಟ್ಟ ಎಸಿ…ಕೇವಲ 24 ಗಂಟೆಗಳ ಅವಧಿಯಲ್ಲಿ ಬರೊಬ್ಬರಿ ಐವರ ಸಾವು!

Pinterest LinkedIn Tumblr

ಕಾನ್ಪುರ: ಆಕ್ಸಿಜನ್ ಸಿಲಿಂಡರ್ ಇಲ್ಲದೇ ಬಿಆರ್ ಡಿ ಆಸ್ಪತ್ರೆಯಲ್ಲಿ ಮಕ್ಕಳ ಸರಣಿ ಸಾವಿನ ಪ್ರಕರಣ ಹಸಿರಾಗಿರುವಂತೆಯೇ ಇತಂಹುದೇ ಘಟನೆ ಮತ್ತದೇ ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಕಾನ್ಪುರದ ಲಾಲಾ ಲಜಪತ್‌ ರಾಯ್‌ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ ಬರೊಬ್ಬರಿ ಐದು ರೋಗಿಗಳ ಸಾವು ಸಂಭವಿಸಿದೆ. ಮೂಲಗಳ ಪ್ರಕಾರ ಆಸ್ಪತ್ರೆಯಲ್ಲಿರುವ ಐಸಿಯು ಘಟಕದಲ್ಲಿರುವ ಎಸಿ ಕೆಟ್ಟು ಹೋಗಿರುವುದೇ ಈ ಸರಣಿ ಸಾವುಗಳಿಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮೃತ ರೋಗಿಗಳ ಸಂಬಂಧಿಕರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯ ಐಸಿಯು ಘಟಕದಲ್ಲಿ ಕಳೆದ ಬುಧವಾರದಿಂದಲೇ ಎಸಿ ಯಂತ್ರ ಕೆಟ್ಟುಹೋಗಿದ್ದು, ಆ ಬಗ್ಗೆ ಹೆಡ್‌ ನರ್ಸ್‌ ಆಸ್ಪತ್ರೆಯ ಆಡಳಿತ ಮಂಡಳಿಗೆ ಲಿಖೀತ ದೂರು ನೀಡಿದ್ದರು. ಇನ್ನು ನಗರದಲ್ಲಿರುವ ಅತಿಯಾದ ಉಷ್ಣತೆಯೇ ರೋಗಿಗಳ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ. ಎಸಿ ಕೈಕೊಟ್ಟಿದ್ದರಿಂದ ರೋಗಿಗಳಿಗೆ ಅನುಕೂಲವಾಗಲಿ ಎಂದು ಐಸಿಯು ಘಟಕದ ಕಿಟಕಿಗಳನ್ನು ತೆರೆದಿಡಲಾಗಿತ್ತು. ಆದರೆ ಕಾನ್ಪುರದಲ್ಲಿ ಅತಿಯಾದ ಉಷ್ಣತೆ ಇರುವುದರಿಂದ ರೋಗಿಗಳ ಚಿಕಿತ್ಸೆ ಫಲಕಾರಿಯಾಗುತ್ತಿಲ್ಲ. ರೋಗಿಗಳಿಗೆ ಅತಿಯಾದ ಉಷ್ಣತೆ ತಾಳಲಾಗುತ್ತಿಲ್ಲ ಎಂದು ಹೇಳಲಾಗಿದೆ.

ಇನ್ನು ಆಸ್ಪತ್ರೆಯ ಐಸಿಯು ಘಟಕದ ಮುಖ್ಯಸ್ಥರಾಗಿರುವ ವೈದ್ಯ ಡಾ.ಸೌರಭ್‌ ಅಗ್ರವಾಲ್‌ ಅವರು, ಐಸಿಯು ಎಸಿಗಳು ಕೆಟ್ಟಿರುವುದು ಹೌದು. ಆದರೆ ಎಸಿ ಕೆಟ್ಟಿರುವುದರಿಂದಲೇ ರೋಗಿಗಳ ಸಾವು ಸಂಭವಿಸಿದೆ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಮ್ಯಾಜಿಸ್ಟ್ರೇಟರಲ್ಲಿ ದೂರು ದಾಖಲಿಸಲಾಗಿದ್ದು, ಅವರು ಖುದ್ದು ಆಗಮಿಸಿ ತನಿಖೆ ನಡೆಸಿದ್ದಾರೆ. ಮೃತಪಟ್ಟಿರುವ ರೋಗಿಗಳ ಕುಟುಂಬದವರಿಗೆ ಎಲ್ಲ ರೀತಿಯಲ್ಲಿ ನೆರವಾಗುವ ಭರವಸೆಯನ್ನು ಅವರು ನೀಡಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಇದೇ ಉತ್ತರ ಪ್ರದೇಶದ ಗೋರಖ್‌ಪುರದ ಬಿಆರ್‌ಡಿ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸಿಲಿಂಡರ್‌ ಇಲ್ಲದ ಕಾರಣಕ್ಕೆ ಹಲವಾರು ಶಿಶುಗಳ ಸಾವು ಸಂಭವಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

Comments are closed.