ರಾಷ್ಟ್ರೀಯ

ಮಹಿಳೆಯರು, ಮಾನಸಿಕ ಅಸ್ವಸ್ಥರ ಆರೈಕೆ ಕೇಂದ್ರಕ್ಕೆ 3 ಕೋಟಿಯ ಆಸ್ತಿ ದಾನ!

Pinterest LinkedIn Tumblr


ತಿರುವನಂತಪುರ: ಕೊಲ್ಲಂನ ನಿವಾಸಿಯೊಬ್ಬರು ಪೂರ್ವಾರ್ಜಿತವಾಗಿ ಬಂದಿರುವ ಮೂರು ಕೋಟಿ ಮೌಲ್ಯದ 83.4 ಸೆಂಟ್ಸ್‌ ಜಾಗ ಮತ್ತು ಮನೆಯನ್ನು ಮಹಿಳೆಯರು ಮತ್ತು ಮಾನಸಿಕ ಅಸ್ವಸ್ಥರ ಆರೈಕೆ ಕೇಂದ್ರ ನಿರ್ಮಿಸುವುದಕ್ಕೆಂದು ಸರಕಾರಕ್ಕೆ ದಾನ ಮಾಡಿದ್ದಾರೆ.

ಹೀಗೆ ಆಸ್ತಿಯನ್ನು ಸರಕಾರಕ್ಕೆ ದಾನ ಮಾಡಲು ನಿವೃತ್ತ ಶಿಕ್ಷಕ ಎನ್‌. ಕಮಲಾಸನನ್‌ ಅವರಿಗೆ ಪ್ರೇರಣೆಯಾಗಿದ್ದು, ಅವರ ಮಗಳು ಎದುರಿಸುತ್ತಿರುವ ಮಾನಸಿಕ ಅನಾರೋಗ್ಯ ಸಮಸ್ಯೆ. ಹೀಗಾಗಿ ಅವರು ವೆಲಿಯಂನಲ್ಲಿರುವ ಆಸ್ತಿಯನ್ನು ದಾನ ಮಾಡಲು ಮುಂದಾದರು.

ಕಮಲಾಸನನ್‌ ಅವರ ಮಗಳು ಕಳೆದ 25 ವರ್ಷಗಳಿಂದ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರೆ. ತನ್ನ ಮರಣದ ನಂತರ ಮಗಳ ಆರೈಕೆ ಮಾಡುವವರು ಯಾರು ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. ಸರಕಾರವನ್ನು ಸಂಪರ್ಕಿಸಿದ ಅವರು, ಈ ಆಸ್ತಿಯನ್ನು ಸರಕಾರ ಸ್ವಾಧೀನಪಡಿಸಿ ತನ್ನ ಮಗಳ ಹೆಸರಿನಲ್ಲಿ ಮಾನಸಿಕ ಅಸ್ವಸ್ಥರಿಗಾಗಿ ಕೇರ್‌ ಹೋಂ ನಡೆಸುವಂತೆ ಮನವಿ ಸಲ್ಲಿಸಿದ್ದರು. ಕೇರಳದಲ್ಲಿ ಶೇ. ಒಂದರಷ್ಟು ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿದ್ದು, ಅಂತವರಿಗೆ ಕೇರ್‌ ಹೋಂ ನೆರವು ಸಿಗಬೇಕು ಎಂಬ ಅಪೇಕ್ಷೆ ಕಮಲಸನನ್‌ ಅವರದು.

ಎರಡು ವರ್ಷದ ಬಳಿಕ ಸಾಮಾಜಿಕ ನ್ಯಾಯ ಇಲಾಖೆ ಆಸ್ತಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ಅಲ್ಲಿ ಮಾನಸಿಕ ಅಸ್ವಸ್ಥರ ಆರೈಕೆ ಕೇಂದ್ರ ಆರಂಭಿಸಿ ಸರಕಾರವೇ ಅದನ್ನು ನಡೆಸಲಿದೆ ಎಂದು ಇಲಾಖೆ ಪ್ರಕಟಿಸಿದೆ.

ಈ ಕೇಂದ್ರದಲ್ಲಿ ಕಮಲಾಸನನ್‌ ಅವರ ಮಗಳಿಗೆ ಎಲ್ಲ ಅಗತ್ಯ ಆರೈಕೆ ಮತ್ತು ಸೌಲಭ್ಯಗಳನ್ನು ಜೀವಿತಾವಧಿವರೆಗೂ ಕಲ್ಪಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಕೇಂದ್ರದ ದೈನಂದಿನ ಕಾರ್ಯಚಟುವಟಿಕೆ ಸುಗಮವಾಗಿ ನಡೆಯುವುದಕ್ಕೆ ಸಮಿತಿ ರಚಿಸಲಾಗುವುದು. ಇದರಲ್ಲಿ ಇಲಾಖಾಧಿಕಾರಿ, ಪಂಚಾಯತ್‌ ಅಧ್ಯಕ್ಷರು ಸೇರಿದಂತೆ ಹಲವು ಜನಪ್ರತಿನಿಧಿಗಳು ಮತ್ತು ಕಮಲಸನನ್‌ ಅವರು ಸದಸ್ಯರಾಗಿರುತ್ತಾರೆ. ಸದ್ಯದಲ್ಲೇ ಆರೈಕೆ ಕೇಂದ್ರ ಕಾರ್ಯಾರಂಭಕ್ಕೆ ಬೇಕಾದ ಕೆಲಸ ಕಾರ್ಯಗಳು ಆರಂಭಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಮಲಾಸನನಸ್‌ ಅವರು ಸಾಂತ್ವನ ಕೇಂದ್ರದ ಕಾರ್ಯದರ್ಶಿಯೂ ಹೌದು. ಪತ್ನಿ ಜತೆ ಕೋಯಿಕ್ಕೋಡ್‌ನಲ್ಲಿ ಮಾನಸಿಕ ಅಸ್ವಸ್ಥರಿಗಾಗಿ ಡೇ ಕೇರ್‌ ಸೆಂಟರ್‌ ನಡೆಸುತ್ತಿದ್ದಾರೆ.

Comments are closed.