ರಾಷ್ಟ್ರೀಯ

2019ರ ಲೋಕಸಭೆಯ ದಿಕ್ಸೂಚಿ ಎನ್ನಲಾದ ಉಪಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗ!

Pinterest LinkedIn Tumblr


ಹೊಸದಿಲ್ಲಿ: 2019 ರ ಲೋಕಸಭೆಗೆ ದಿಕ್ಸೂಚಿ ಎನ್ನಲಾದ ವಿವಿಧ ರಾಜ್ಯಗಳ 4 ಲೋಕಸಭಾ ಕ್ಷೇತ್ರಗಳು ಮತ್ತು 11 ವಿಧಾನ ಸಭಾ ಕ್ಷೇತ್ರಗಳಿಗೆ ನಡೆದ ಚುನಾವಣಾ ಫ‌ಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.

4 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 1 ಗೆದ್ದರೆ, ಇನ್ನೊಂದು ಎನ್‌ಡಿಎ ಮಿತ್ರ ಪಕ್ಷ ಎನ್‌ಡಿಪಿಪಿ ಗೆದ್ದಿದೆ. ಆರ್‌ಎಲ್‌ಡಿ 1 ಗೆದ್ದಿದ್ದರೆ, ಎನ್‌ಸಿಪಿ 1 ಕ್ಷೇತ್ರ ಗೆದ್ದುಕೊಂಡಿದೆ.

11 ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದೂ ಕ್ಷೇತ್ರವನ್ನು ಗೆಲ್ಲಲಾಗದೆ ಬಿಜೆಪಿ ಮುಖಭಂಗ ಅನುಭವಿಸಿದೆ.

ಮಹಾರಾಷ್ಟ್ರ
ಪಾಲ್‌ಘರ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ರಾಜೇಂದ್ರ ಗಾವಿತ್‌ ಅವರು ಗೆಲುವು ಸಾಧಿಸುವ ಮೂಲಕ ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಪಾಲ್ಘರ್‌ನಲ್ಲಿ ಬಿಜೆಪಿ ಸಂಸದ ಚಿಂತಾಮನ್‌ ವನಗಾ ಅವರ ಸಾವಿನಿಂದಾಗಿ ಉಪಚುನಾವಣೆ ನಡೆದಿದ್ದು, ಚಿಂತಾಮನ್‌ ಪುತ್ರ ಶ್ರೀನಿವಾಸ್‌ ವನಗಾ ಬಿಜೆಪಿ ತೊರೆದು ಶಿವಸೇನೆ ಅಭ್ಯರ್ಥಿಯಾಗಿ ಮುಖಭಂಗ ಅನುಭವಿಸಿದ್ದಾರೆ.

ಭಂಡರಾ ಗೊಂಡಿಯಾ ಲೋಕಸಭಾ ಕ್ಷೇತ್ರದಲ್ಲಿ ಎನ್‌ಸಿಪಿಯ ಕುಕಾಡೆ ಎಂ.ಯಶವಂತ್‌ ರಾವ್‌ ಅವರು ಬಿಜೆಪಿ ಅಭ್ಯರ್ಥಿಗಿಂತ ಮುನ್ನಡೆ ಸಾಧಿಸಿದ್ದು, ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ. ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಂತಾಗಿದೆ.

ಮಹಾರಾಷ್ಟ್ರದ ಪಲೂಸ್‌ ಕಡೇಗಾಂವ್‌ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲುವ ಮೂಲಕ ಕ್ಷೇತ್ರ ಉಳಿಸಿಕೊಂಡಿದೆ.

ಉತ್ತರ ಪ್ರದೇಶ
ಕೈರಾನ ಕಳಕೊಂಡ ಬಿಜೆಪಿ
ಬಿಜೆಪಿ ಸಂಸದ ಹುಕುಂ ಸಿಂಗ್‌ ಅವರ ನಿಧನದಿಂದ ತೆರವಾಗಿದ್ದ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆ ಯಲ್ಲಿ ಆರ್‌ಎಲ್‌ಡಿ ಅಭ್ಯರ್ಥಿ ತಬಸ್ಸಮ್‌ ಬೇಗಂ ಅವರು ಬಿಜೆಪಿ ಅಭ್ಯರ್ಥಿ ಮೃಗಾಂಕ ಸಿಂಗ್‌ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಆರ್‌ಎಲ್‌ಡಿಗೆ ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌ ಬೆಂಬಲ ಸೂಚಿಸಿದ್ದವು. ಹೀಗಾಗಿ ಗೆಲುವು ಸಾಧಿಸುವುದು ಸುಲಭವಾಯಿತು.

ನೂರ್‌ಪುರ್‌ ವಿಧಾನಸಭಾ ಕ್ಷೇತ್ರವನ್ನೂ ಆಡಳಿತಾರೂಢ ಬಿಜೆಪಿ ಕಳೆದುಕೊಂಡಿದ್ದು ,ಎಸ್‌ಪಿ ಅಭ್ಯರ್ಥಿ ನಯೀಮ್‌ ಉಲ್‌ ಹಸನ್‌ ಜಯ ಭೇರಿ ಬಾರಿಸಿದ್ದಾರೆ.

ಬಿಹಾರ
ಜೊಕಿಹತ್‌ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜೆಡಿಯು ಗೆದ್ದಿದ್ದ ಸ್ಥಾನವನ್ನು ವಿಪಕ್ಷ ಆರ್‌ಜೆಡಿ ಗೆಲ್ಲುವ ಮೂಲಕ ಆಡಳಿತಾರೂಢ ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ ಅಘಾತ ನೀಡಿದ್ದಾರೆ.

ನಾಗಾಲ್ಯಾಂಡ್‌
ನಾಗಾಲ್ಯಾಂಡ್‌ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮಿತ್ರ ಪಕ್ಷ ಎನ್‌ಡಿಪಿಪಿ ಗೆಲುವು ಸಾಧಿಸಿದೆ.

ಪಂಜಾಬ್‌
ವಿಪಕ್ಷ ಶಿರೋಮಣಿ ಆಕಾಲಿದಳ ಗೆದ್ದಿದ್ದ ಶಾಕೋಟ್‌ ವಿಧಾನಸಭಾ ಕ್ಷೇತ್ರವನ್ನು ಆಡಳಿತಾರೂಢ ಕಾಂಗ್ರೆಸ್‌ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಜಾರ್ಖಂಡ್‌ ಜೆಎಂಎಂ ಜಯಭೇರಿ
ಸಿಲ್ಲಿ ವಿಧಾನಸಭಾ ಕ್ಷೇತ್ರ ಮತ್ತು ಗೋಮಿಯಾವನ್ನು ವಿಪಕ್ಷ ಜೆಎಂಎಂ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಪಶ್ಚಿಮ ಬಂಗಾಲ
ಪಶ್ಚಿಮ ಬಂಗಾಲದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಉತ್ತರಾಖಂಡ
ಥರಾಲಿ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಬಿಜೆಪಿ ಸೋಲು ಅನುಭವಿದೆ. ಕ್ಷೇತ್ರ ಉಳಿಸಿಕೊಳ್ಳುವುಲ್ಲಿ ಬಿಜೆಪಿ ವಿಫ‌ಲವಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ.

ಮೇಘಾಲಯ
ಅಂಪಾಟಿ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್‌ ಗೆದ್ದುಕೊಂಡಿದೆ.

ಕೇರಳ
ಚಂಗನೂರು ವಿಧಾನಸಭಾ ಕ್ಷೇತ್ರವನ್ನು ಆಡಳಿತಾರೂಢ ಸಿಪಿಎಂ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕ್ಷೇತ್ರವನ್ನು ಎಡರಂಗ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎಲ್‌ಡಿಎಫ್ ಮೈತ್ರಿ ಕೂಟದ ಅಭ್ಯರ್ಥಿ ಸಾಜಿ ಚೆರಿಯನ್‌ ಅವರು ಕಾಂಗ್ರೆಸ್‌ನ ವಿಜಯ್‌ಕುಮಾರ್‌ ವಿರುದ್ಧ 20,956 ಮತಗಳ ಅಂತರ ಜಯ ತನ್ನದಾಗಿಸಿಕೊಂಡರು. ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್‌.ಶ್ರೀಧರನ್‌ ಪಿಳೈ ಅವರು 35,270 ಮತಗಳನ್ನು ಪಡೆದರು. ವಿಜೇತ ಚೆರಿಯನ್‌ 67,303 ಮತಗಳನ್ನು ಪಡೆದಿದ್ದಾರೆ.

Comments are closed.