ರಾಷ್ಟ್ರೀಯ

ಪಠ್ಯ ಪುಸ್ತಕದ ಮೂಟೆ ಹೊರಲು ಮಕ್ಕಳೇನು ವೇಟ್ ಲಿಫ್ಟರ್‌ಗಳಲ್ಲ: ಚೆನ್ನೈ ಹೈಕೋರ್ಟ್

Pinterest LinkedIn Tumblr


ಚೆನ್ನ : ಮಕ್ಕಳ ಬೆನ್ನ ಮೇಲಿನ ಪುಸ್ತಕದ ಹೊರೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಚೆನ್ನೈ ಹೈಕೋರ್ಟ್, ಖಾಸಗಿ ಸಿಬಿಎಸ್ಇ ಶಾಲೆಗಳು ಕೇವಲ ಎನ್‌ಸಿಇಆರ್‌ಟಿ ಶಿಫಾರಸು ಪಠ್ಯಕ್ರಮವನ್ನು ಅನುಸರಿಸುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ.

ಸಿಬಿಎಸ್ಇ ಶಾಲೆಗಳಿಗೆ ಎನ್‌ಸಿಇಆರ್‌ಟಿ ಸೂಚಿಸಿರುವ ಪಠ್ಯಕ್ರಮವನ್ನು ಅನುಸರಿಸಲು ನಿರ್ದೇಶನ ನೀಡುವಂತೆ ಕೋರಿ ವಕೀಲ ಎಂ.ಪುರುಶೋತಮಾನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ತೀರ್ಮಾನಕ್ಕೆ ಬಂದಿದೆ.

ಪಠ್ಯ ಪುಸ್ತಕದ ಮೂಟೆ ಹೊರಲು ಮಕ್ಕಳೇನು ವೇಟ್ ಲಿಫ್ಟರ್‌ಗಳಲ್ಲ

ಯಾವುದೇ ಒತ್ತಡಗಳಿಲ್ಲದೆ ಸಂತೋಷ ಮತ್ತು ಉತ್ಸಾಹದಿಂದ ಬಾಲ್ಯವನ್ನು ಅನುಭವಿಸುವುದು ಮಕ್ಕಳ ಮೂಲಭೂತ ಹಕ್ಕು. ಮಕ್ಕಳ ಶಾಲಾ ಬ್ಯಾಗ್‌ಗಳು ಸರಕು ತುಂಬುವ ಕಂಟೇನರ್‌ಗಳಲ್ಲ. ಅನೇಕ ವಿಷಯಗಳನ್ನು ಪಠ್ಯವಾಗಿ ಸೇರಿಸುವ ಮೂಲಕ ಮಕ್ಕಳ ಮೇಲೆ ಅತಿಯಾದ ಹೊರೆ ಹೊರಿಸುವುದು ಸರಿ ಅಲ್ಲ. ಸಂವಿಧಾನದ 21 ನೇ ವಿಧಿ ಪ್ರಕಾರ ವಯಸ್ಸಿಗನುಗುಣವಾಗಿ ಮಕ್ಕಳು ಕನಿಷ್ಠ ಇಷ್ಟು ಗಂಟೆ ನಿದ್ದೆ ಮಾಡಬೇಕು. ಅಗತ್ಯ ನಿದ್ರೆ ಅಭಾವವು ಮಾನಸಿಕವಾಗಿ ಮತ್ತು ದೈಹಿಕವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಅವರ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆ, ಎಂದು ನ್ಯಾಯಮೂರ್ತಿ ಎನ್. ಕಿರುಬಾಕರನ್ ಅಭಿಪ್ರಾಯ ಪಟ್ಟಿದ್ದಾರೆ.

ಒತ್ತಡ ಅಥವಾ ಆಘಾತವಿಲ್ಲದೆಯೇ ಅಧ್ಯಯನ ಮಾಡಲು ಮಕ್ಕಳಿಗೆ ಸಹಕಾರಿ ಕಲಿಕಾ ಪರಿಸರದ ಅಗತ್ಯವಿದೆ. 5 ವರ್ಷದವರೆಗೆ ಮಕ್ಕಳ ಕೈಯ್ಯಲ್ಲಿ ಪೆನ್ಸಿಲ್ ಹಿಡಿಸಬಾರದು. ವರ್ಗ I ಮತ್ತು ವರ್ಗ II ವಿದ್ಯಾರ್ಥಿಗಳಿಗೆ ಮನೆಪಾಠ ನೀಡುವುದು ಸರಿಯಲ್ಲ. ಇದವರ ಮೇಲೆ ಒತ್ತಡವನ್ನುಂಟು ಮಾಡಿ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ, ಎಂದು ನ್ಯಾಯಾಧೀಶರು ಪ್ರತಿಪಾದಿಸಿದ್ದಾರೆ.

ಸೂಕ್ತವಲ್ಲದ ವಯಸ್ಸಿನಲ್ಲಿ ಸೂಚಿತವಲ್ಲದ ಪುಸ್ತಕಗಳನ್ನು ಓದಿಸುವುದು ಬೆಳೆಯುವ ಮನಸ್ಸಿನ ಮೇಲೆ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತದೆ. ತಮ್ಮ ಆರೋಗ್ಯಕ್ಕೆ ಹಾನಿ ತರುವಂತಹ ಭಾರವಾದ ಶಾಲಾ ಬ್ಯಾಗ್ ಹೊತ್ತುಕೊಳ್ಳುವ ಶಿಕ್ಷೆಯನ್ನು ಮಕ್ಕಳಿಗೆ ನೀಡಬಾರದು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.

Comments are closed.