ರಾಷ್ಟ್ರೀಯ

ಮೇಜರ್ ನಿತಿನ್ ಲೀಟುಲ್ ಗೊಗೋಯ್ ಫೇಸ್‌ಬುಕ್‌ ಗೆಳೆಯ: ಕಾಶ್ಮೀರಿ ಯುವತಿ

Pinterest LinkedIn Tumblr


ಶ್ರೀನಗರ: ಮೇಜರ್ ನಿತಿನ್ ಲೀಟುಲ್ ಗೊಗೋಯ್ ತರುಣಿ ಜತೆಗೆ ಹೋಟೆಲ್ ಪ್ರವೇಶಿಸಿದ್ದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಈ ಬಗ್ಗೆ ಮಾತನಾಡಿರುವ ಕಾಶ್ಮೀರಿ ಯುವತಿ, ನಾನು ಮೇಜರ್ ಗೊಗೋಯ್ ಅವರ ಫೇಸ್‌ಬುಕ್ ಫ್ರೆಂಡ್ ಆಗಿದ್ದೀನಿ. ಹೀಗಾಗಿ ನನ್ನ ಇಚ್ಛೆಯ ಮೇರೆಗೆ ನಾನು ಅವರನ್ನು ಭೇಟಿ ಮಾಡಲು ಹೋಗಿದ್ದೆ ಎಂದು ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ನೀಡಿದ್ದಾಳೆ. ಆದರೆ, ಅವರ ತಾಯಿ ಮಾತ್ರ ಇದು ಸುಳ್ಳು ಎಂದು ಹೇಳಿದ್ದರಿಂದ ಪ್ರಕರಣ ವಿವಾದವಾಗಿ ಪರಿಣಮಿಸಿದೆ.

ಕಳೆದ ವರ್ಷವಷ್ಟೇ ಕಲ್ಲು ಎಸೆಯುವವರನ್ನು ತಡೆಯಲು ಜೀಪ್‌ಗೆ ಕಾಶ್ಮೀರಿ ವ್ಯಕ್ತಿಯೊಬ್ಬರನ್ನು ಕಟ್ಟಿಹಾಕಿ ಮಾನವ ರಕ್ಷಣೆಯ ರೀತಿ ಬಳಸಿಕೊಂಡ
ವಿವಾದದಲ್ಲಿ ಮೇಜರ್ ಗೊಗೋಯ್ ಸಿಲುಕಿದ್ದರು. ಈಗ ಕಾಶ್ಮೀರಿ ಯುವತಿಯನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದಕ್ಕೆ ಅಲ್ಲಿನ ಸಿಬ್ಬಂದಿಯೊಬ್ಬರು ತಗಾದೆ ತೆಗೆದಿದ್ದರು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ತರುಣಿ, ನನಗೆ ಗೊಗೋಯ್ ಮೊದಲಿನಿಂದಲೂ ಗೆಳೆಯರು. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದರು. ಹೀಗಾಗಿ, ಅವರ ಜತೆ ಕಾಲ ಕಳೆಯಲು ನಾನು ನನ್ನಿಚ್ಛೆಯಂತೆ ಹೋಟೆಲ್‌ಗೆ ತೆರಳಿದ್ದೆ ಎಂದು ಕೋರ್ಟ್‌ನಲ್ಲಿ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ಕೊಟ್ಟಿದ್ದಾಳೆ. ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌, ಡಿಎಸ್‌ಪಿ ದರ್ಜೆಯ ಅಧಿಕಾರಿ ಹಾಗೂ ಪೊಲೀಸ್ ಸೂಪರಿಟೆಂಡೆಂಟ್ ಈ ತನಿಖೆ ನಡೆಸುತ್ತಿದ್ದು, ಇವರ ಎದುರಲ್ಲೇ ಕಾಶ್ಮೀರಿ ಯುವತಿ ಸ್ಪಷ್ಟನೆ ಕೊಟ್ಟಿದ್ದಾಳೆ. ಅಲ್ಲದೆ, ಈ ಹಿಂದೆಯೂ ಹಲವು ಬಾರಿ ಅವರನ್ನು ಭೇಟಿ ಮಾಡಿದ್ದು, ಅವರ ಜತೆ ಹೊರಗೆ ತೆರಳಿದ್ದೇನೆ ಎಂದು ತರುಣಿ ಹೇಳಿಕೆ ನೀಡಿದ್ದಾಳೆಂದು ಮೂಲಗಳು ಮಾಹಿತಿ ನೀಡಿವೆ.

ಬುದ್ಗಾಮ್ ಜಿಲ್ಲೆಯ ಚೆಕ್ – ಇ – ಕವೂಸಾ ಗ್ರಾಮದ ಯುವತಿ ತಾನು ಅಪ್ರಾಪ್ತೆಯಲ್ಲ ಎಂದು ಹೇಳಿಕೊಂಡಿದ್ದು, ಇದಕ್ಕೆ ದಾಖಲೆಯಾಗಿ ತನ್ನ ಆಧಾರ್ ಕಾರ್ಡ್‌ ಅನ್ನು ಕೋರ್ಟ್‌ನಲ್ಲಿ ತೋರಿಸಿದ್ದಾಳೆ. ಅಲ್ಲದೆ, ಇದರಲ್ಲಿ 1999ರಲ್ಲಿ ಯುವತಿ ಜನಿಸಿದ್ದಾಳೆ ಎಂದು ಇತ್ತು ಎಂದು ಮೂಲಗಳು ತಿಳಿಸಿವೆ. ಜತೆಗೆ, 10ನೇ ತರಗತಿವರೆಗೆ ಓದಿರುವ ಯುವತಿ, ಸ್ವಸಹಾಯ ಸಂಘದ ನೆರವಿನೊಂದಿಗೆ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿದುಬಂದಿದೆ. ಆದರೆ, ಇವಳು ಅಪ್ರಾಪ್ತೆಯೋ ಅಲ್ಲವೋ ಎಂಬುದರ ಬಗ್ಗೆ ಇನ್ನೂ ತನಿಖೆ ನಡೆಯಬೇಕಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನು, ಆದಿಲ್ ಅದ್ನಾನ್ ಎಂಬ ಹೆಸರಿನ ಫೇಸ್‌ಬುಕ್ ಅಕೌಂಟ್ ಜತೆಗೆ ಸಂಪರ್ಕಕ್ಕೆ ಬಂದಿದ್ದೆ. ಬಳಿಕ, ಮೇಜರ್ ಗೊಗೋಯ್ ಸ್ವತ: ಇದು ತಾನೇ ಎಂದು ಹೇಳಿಕೊಂಡಿದ್ದರು. ಬಳಿಕ ನಾವಿಬ್ಬರೂ ಗೆಳೆಯರಾಗಿದ್ದೆವು ಎಂದು ಈ ಯುವತಿ ಕೋರ್ಟ್‌ನಲ್ಲಿ ಉತ್ತರ ಕೊಟ್ಟಿದ್ದಾಳೆ. ಹಾಗೆ, ಗೊಗೋಯ್‌ನ ಸಹಚರ ಸಮೀರ್ ಅಹ್ಮದ್ ಮಾ ಕೂಡ ತನಗೆ ಪರಿಚಯ ಎಂದು ಯುವತಿ ಹೇಳಿದ್ದಾಳೆ. ಆದರೆ, ಅವರ ಪೋಷಕರ ಹೆಸರನ್ನು ಕೇಳಿದಾಗ, ಅವಳಿಗೆ ಅದನ್ನು ಹೇಳಲು ಸಾಧ್ಯವಾಗಿಲ್ಲ.

ಆದರೆ, ಯುವತಿಯ ತಾಯಿ ನಸೀಮಾ ಬೇಗಂ ಮಾತ್ರ ಮೇಜರ್ ಗೊಗೋಯ್ ಹಾಗೂ ಸಮೀರ್ ತಮ್ಮ ಮನೆಗೆ ಬರುತ್ತಿದ್ದರು. ಯಾವುದೇ ವಿಷಯವಿಲ್ಲದಿದ್ದರೂ ತನ್ನ ಮಗಳ ಜತೆ ಮಾತುಕತೆ ನಡೆಸುತ್ತಿದ್ದರು ಎಂದು ಆರೋಪಿಸಿದ್ದಾರೆ. ತನ್ನ ಮಗಳ ವಯಸ್ಸು 17 ಎಂದು ಕೋರ್ಟ್‌ನಲ್ಲಿ ಹೇಳಿದ ತಾಯಿ, ತಡರಾತ್ರಿಯ ವೇಳೆಯಲ್ಲೂ ಸಹ ಗೊಗೋಯ್ ಹಾಗೂ ಸಮೀರ್ ತಮ್ಮ ಮನೆಗೆ ಬರುತ್ತಿದ್ದರು. ಗೊಗೋಯ್‌ನನ್ನು ನೋಡಿದರೆ, ನನಗೆ ಭಯವಾಗುತ್ತಿತ್ತು. ನನ್ನ ಮಗಳ ಜತೆ ಯಾವಾಗಲೂ ಮಾತನಾಡುತ್ತಿದ್ದ. ಆದರೆ, ಅವರು ಹೋಟೆಲ್‌ನಲ್ಲಿ ಸಿಕ್ಕಿಬೀಳುತ್ತಾರೆಂದು ನನಗೆ ಎಂದಿಗೂ ಅನಿಸಿರಲಿಲ್ಲ ಎಂದು ಯುವತಿಯ ತಾಯಿ ನಸೀರಾ ಬೇಗಂ ಹೇಳಿಕೊಂಡಿದ್ದಾರೆ. ಅಲ್ಲದೆ, ತನ್ನ ಪುತ್ರಿ ನರ್ಬಾಲ್‌ನಲ್ಲಿರುವ ಜಮ್ಮು – ಕಾಶ್ಮೀರ ಬ್ಯಾಂಕ್‌ಗೆ ಹೋಗುತ್ತಾನೆಂದು ಹೇಳಿ, ಶ್ರೀನಗರಕ್ಕೆ ಹೋಗಿದ್ದಾಳೆ ಎಂದು ಆರೋಪಿಸಿದ್ದು, ತನ್ನ ಪುತ್ರಿಯನ್ನು ಸೆಳೆಯಲು ಮೇಜರ್‌ನನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ ಸಮೀರ್ ವಿರುದ್ಧವೂ ನಸೀಮಾ ಆರೋಪ ಮಾಡಿದ್ದಾರೆ.

Comments are closed.