ರಾಷ್ಟ್ರೀಯ

ಕರ್ನಾಟಕ ಚುನಾವಣೆಯಲ್ಲಿ ಹಣದ ಶಕ್ತಿ ಬಳಸಿದ್ದಕ್ಕಾಗಿ ಮೋದಿ ಇಡೀ ದೇಶದ ಎದುರು ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಆಗ್ರಹ

Pinterest LinkedIn Tumblr

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹಣದ ಶಕ್ಕಿ ಬಳಕೆ ಮಾಡಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ನಾಯಕರು ಅಪರಾಧಗಳ ಚಾಳಿಕೋರರಾಗಿದ್ದು, ಕರ್ನಾಟಕ ಚುನಾವಣೆಯಲ್ಲಿ ಹಣದ ಶಕ್ತಿ ಬಳಸಿದ ಕಾರಣಕ್ಕಾಗಿ ಮೋದಿಯವರು ಇಡೀ ದೇಶದ ಎದುರು ಕ್ಷಮೆಯಾಚಿಸಬೇಕೆಂದು ಹೇಳಿದ್ದಾರೆ.

ಕರ್ನಾಟಕದ ಚುನಾವಣೆಗೆ ಬಿಜೆಪಿ ರೂ.6,500 ಕೋಟಿ ಖರ್ಚು ಮಾಡಿದೆ. ಇನ್ನು ಶಾಸಕರ ಖರೀದಿಗೆ ರೂ.4,500 ಕೋಟಿ ತೆಗೆದಿರಿಸಿದೆ ಎಂದು ಆರೋಪ ಮಾಡಿದ್ದಾರೆ.

ಒಟ್ಟಾರೆ ರೂ.11 ಸಾವಿರ ಕೋಟಿಗಳನ್ನು ಚುನಾವಣಾ ಉದ್ದೇಶಕ್ಕೆ ಬಿಜೆಪಿ ತೆಗೆದಿರಿಸಿತ್ತು. ರೂ6,500 ಕೋಟಿ ಚುನಾವಣೆಗೆ ಖರ್ಚು ಮಾಡಿದರೆ, ಶಾಸಕರ ಖರೀದಿಗೆ ರೂ.4,500 ಕೋಟಿ ತೆಗೆದಿರಿಸಿದೆ. ಅಮಿತ್ ಶಾ, ಮೋದಿಯವರು ಈ ಅಕ್ರಮಗಳಿಗಾಗಿ ಕರ್ನಾಟಕದ ಜನರ ಕ್ಷಮೆಯಾಚಿಸಬೇಕು. ಆದರೆ, ಅವರಿಗೆ ದಪ್ಪ ಚರ್ಮವಿದೆ. ಶಾಸಕರ ಖರೀದಿಯಲ್ಲಿ ಅವರದ್ದು ಎತ್ತಿದ ಕೈ. ಬಲಾಬಲ ಪರೀಕ್ಷೆ ದಿನದಂದು ಇಬ್ಬರು ಕಾಂಗ್ರೆಸ್ ಶಾಸಕರು ಪೊಲೀಸರ ರಕ್ಷಣೆಯಲ್ಲಿ ಆಗಮಿಸಬೇಕಾಯಿತು ಎಂದು ದೂರಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಸಂವಿಧಾನದ ಜ್ಞಾನವಿಲ್ಲ. ಒಂದು ವೇಳೆ ಇದ್ದರೂ ಅದಕ್ಕೆ ಅವರು ಗೌರವ ನೀಡಲ್ಲ ಎಂದು ಛೇಡಿಸಿದ್ದಾರೆ.

Comments are closed.