ರಾಷ್ಟ್ರೀಯ

ನಾವು ಯಾರಿಗೂ ಸಮಯಾವಕಾಶ ಕೊಡೋದಿಲ್ಲ, ಬಿಜೆಪಿ ಇಂದೇ ಬಹುಮತ ಸಾಬೀತುಪಡಿಸಬೇಕು: ಸುಪ್ರೀಂ ಹೈಲೈಟ್ಸ್

Pinterest LinkedIn Tumblr

ನವದೆಹಲಿ:ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿಎಸ್ ಯಡಿಯೂರಪ್ಪ ಇಂದೇ (ಶನಿವಾರ) ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕು. ನಾವು ಯಾರಿಗೂ ಸಮಯಾವಕಾಶ ಕೊಡೋದಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಗುರುವಾರ ರಾತ್ರಿ ಕರ್ನಾಟಕ ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾಗಿತ್ತು. ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಮೂರು ಕಾಲು ಗಂಟೆಗಳ ಕಾಲ ಬಾರೀ ವಾದ, ಪ್ರತಿವಾದ ಆಲಿಸಿತ್ತು. ಬಳಿಕ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಮ್ಮತಿ ಸೂಚಿಸಿ, ಶುಕ್ರವಾರ ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು.

ಸುಪ್ರೀಂಕೋರ್ಟ್ ಕಟಕಟೆಯ ಹೈಲೈಟ್ಸ್:

*ಜನಾದೇಶವೇ ಮುಖ್ಯ:ನ್ಯಾ.ಎ.ಸಿಕ್ರಿ

*ಖಂಡಿತವಾಗಿಯೂ ಇದು ನಂಬರ್ ಗೇಮ್:ನ್ಯಾಯಾಧೀಶರು

*ನಾಳೆಯೇ ವಿಶ್ವಾಸಮತ ಯಾಚನೆ ಮಾಡಬೇಕು

*ಯಾರಿಗೂ ಸಮಯಾವಕಾಶ ಕೊಡೋದಿಲ್ಲ

ಬಿಜೆಪಿ ವಾದವೇನು?

ಬಿಜೆಪಿ ಪರ ವಕೀಲರಾದ ಮುಕುಲ್ ರೋಹ್ಟಗಿ ಅವರು, ಬಿಜೆಪಿಗೆ ಬಹುಮತ ಇರುವ ಪತ್ರವನ್ನು ಸುಪ್ರೀಂ ತ್ರಿಸದಸ್ಯ ಪೀಠಕ್ಕೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ರೆಸಾರ್ಟ್ ರಾಜಕೀಯದಲ್ಲಿ ತೊಡಗಿವೆ ಎಂದು ವಾದಿಸಿದ್ದಾರೆ.

ಮೇ 15ರಂದು ರಾಜ್ಯಪಾಲರಿಗೆ ಸಲ್ಲಿಸಿದ್ದ ಬೆಂಬಲದ ಪ್ರತಿಯನ್ನು ಮುಕುಲ್ ರೋಹ್ಟಗಿ ತ್ರಿಸದಸ್ಯ ಪೀಠದ ಮುಂದಿಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಕಾಂಗ್ರೆಸ್, ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ. ಹೀಗಾಗಿ ಚುನಾವಣೆಯಲ್ಲಿ ನಾವೇ ಅತೀ ಹೆಚ್ಚು (104) ಸ್ಥಾನ ಗಳಿಸಿದ್ದೇವೆ. ಈ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ರಚಿಸಿದೆ ಎಂದು ರೋಹ್ಟಗಿ ಪೀಠದ ಮುಂದೆ ವಾದ ಮಂಡಿಸಿದ್ದಾರೆ.

ನಾವು ಕರ್ನಾಟಕದಲ್ಲಿ ಬಹುಮತ ಸಾಬೀತಿಗೆ ಸಿದ್ಧರಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿರುವುದಾಗಿ ಹೇಳಿದರು.

ಬೆಂಬಲ ನೀಡೋ ಶಾಸಕರ ಹೆಸರನ್ನು ಬಹಿರಂಗಪಡಿಸುವುದಿಲ್ಲ, ಅವರ ಜೀವಕ್ಕೆ ಬೆದರಿಕೆ ಇರುವುದರಿಂದ ಹೆಸರು ಬಹಿರಂಗಪಡಿಸುತ್ತಿಲ್ಲ ಎಂದು ರೋಹ್ಟಗಿ ವಾದ ಮಂಡಿಸುತ್ತಾ ಬಹುಮತ ಇರುವ ಬಗ್ಗೆ ವಾದಿಸಿದ್ದಾರೆ.

ನೀವೂ ಬಹುಮತ ಇದೆ ಅಂತ ಹೇಳ್ತಿದ್ದೀರಿ, ಕಾಂಗ್ರೆಸ್ ನವರೂ ಕೂಡಾ ಬಹುಮತ ಇದೆ ಅಂತ ವಾದಿಸ್ತಿದೆ ಎಂದು ಬಿಜೆಪಿ ವಾದಕ್ಕೆ ಜಡ್ಜ್ ಪ್ರಶ್ನಿಸಿದ್ದಾರೆ. ಬಿಜೆಪಿ ಸಲ್ಲಿಸಿರೋ ಪತ್ರದಲ್ಲಿ ಶಾಸಕರ ಹೆಸರೇ ಇಲ್ಲ.

ಕಾಂಗ್ರೆಸ್ ವಾದವೇನು-ಬಹುಮತ ಸಾಬೀತಿಗೆ ನಾವು ಸಿದ್ಧ?

ಕಾಂಗ್ರೆಸ್ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರು ಯಾರು ಮೊದಲು ಅವಕಾಶ ಪಡೆಯಬೇಕೆಂಬುದನ್ನು ಕೋರ್ಟ್ ಮೊದಲು ತೀರ್ಮಾನಿಸಲಿ ಎಂದು ಪ್ರತಿವಾದ ಮಂಡಿಸಿದ್ದಾರೆ.

ನಾಳೆಯೇ ಬಹುಮತ ಸಾಬೀತುಪಡಿಸಲು ಕಾಂಗ್ರೆಸ್ ಒಪ್ಪಿದೆ. ಸುಪ್ರೀಂಕೋರ್ಟ್ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪರ ಹಿರಿಯ ವಕೀಲ ಅಭಿಷೇಕ ಮನು ಸಿಂಘ್ವಿ ಪ್ರತಿವಾದ ಮಂಡಿಸಿದರು.

ನಾವು ತಯಾರಾಗಿದ್ದೇವೆ, ಆದರೆ ಬಿಜೆಪಿಯವರು ನಾಳೆಯೇ ಬಹುಮತ ಸಾಬೀತಿಗೆ ಸಿದ್ದರಿದ್ದಾರೆಯೇ ಎಂದು ಪ್ರಶ್ನಿಸಿ ಎಂದು ಸಿಂಘ್ವಿ ಮರುಪ್ರಶ್ನಿಸಿದರು. ನಾಳೆಯೇ ಬಹುಮತ ಸಾಬೀತುಪಡಿಸಲು ಬಿಜೆಪಿ ಪರ ವಕೀಲರಾದ ರೋಹ್ಟಗಿ ವಿರೋಧ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

ಜೆಡಿಎಸ್ ಪರ ಕಪಿಲ್ ಸಿಬಲ್ ವಾದ-ರಾಜ್ಯಪಾಲರಿಗೆ ವಿವೇಚನಾಧಿಕಾರ ಇಲ್ಲ

ರಾಜ್ಯಪಾಲರಿಗೆ ವಿವೇಚನಾಧಿಕಾರ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಪರ ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ವಾದ ಮಂಡಿಸಿದ್ದಾರೆ. ಇವೆಲ್ಲವೂ ಚರ್ಚೆ ಮಾಡಬೇಕಾಗಿರುವ ವಿಚಾರಗಳು ಎಂದು ಜಡ್ಜ್ ಸಿಕ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಇದೆಲ್ಲ ಬಗೆಹರಿದ ವಿಚಾರಗಳು ಮತ್ತೆ ವಿಚಾರ ಮಾಡಬೇಕಾಗಿಲ್ಲ ಎಂದು ಸಿಬಲ್ ಹೇಳಿದರು.

ಒಂದು ಕಡೆ ಆಳ ಸಮುದ್ರ, ಮತ್ತೊಂದೆಡೆ ದೆವ್ವ ಇದೆ..ಇದರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು? ವಾದ ಮಂಡನೆ ವೇಳೆ ಉದಾಹರಣೆ ನೀಡಿದ್ದಾರೆ. ನಾವು ಈ ನೆಲದ ಕಾನೂನನ್ನು ಎತ್ತಿಹಿಡಿಯಲು ಇಲ್ಲಿ ಕುಳಿತಿದ್ದೇವೆ ಎಂದು ತ್ರಿಸದಸ್ಯ ಪೀಠ ಹೇಳಿದೆ.

Comments are closed.