ರಾಷ್ಟ್ರೀಯ

ಧೂಳು ಬಿರುಗಾಳಿ ಸಹಿತ ಭಾರಿ ಮಳೆಗೆ ಉತ್ತರ ಭಾರತ ತತ್ತರ: 60ಕ್ಕೂ ಅಧಿಕ ಬಲಿ

Pinterest LinkedIn Tumblr


ಹೊಸದಿಲ್ಲಿ: ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ದಿಲ್ಲಿ – ಎನ್‌ಸಿಆರ್‌ ಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಅಬ್ಬರಿಸಿದ ಧೂಳು ಬಿರುಗಾಳಿ ಸಹಿತ ಭಾರಿ ಮಳೆಗೆ 60ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಇನ್ನೂ 48 ಗಂಟೆಗಳ ಕಾಲ ದೇಶದ ಹಲವೆಡೆ ಗುಡುಗು ಸಹಿತ ಮಳೆ ಮುಂದುವರಿಯಬಹುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಪ್ರದೇಶದಲ್ಲಿ 38 ಬಲಿ
ಉತ್ತರ ಪ್ರದೇಶದ ಹಲವೆಡೆ ಬಿರುಗಾಳಿ, ಆಲಿಕಲ್ಲು ಸಹಿತ ಭಾರಿ ಮಳೆಗೆ 38 ಮಂದಿ ಬಲಿಯಾಗಿದ್ದು, 50 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈ ಪೈಕಿ, ಕಸ್ಗಂಜ್‌ನಲ್ಲಿ ಹೆಚ್ಚು ಮಂದಿ ಮೃತಪಟ್ಟಿದ್ದು, 6 ಜನ ಸಾವಿಗೀಡಾಗಿದ್ದಾರೆ ಎಂದು ಸರಕಾರಿ ಮೂಲಗಳು ಮಾಹಿತಿ ನೀಡಿವೆ. ಹಾಗೂ, ಬಾರಾಬಂಕಿ ಹಾಗೂ ಬರೇಲಿಯಲ್ಲಿ ತಲಾ ಐವರು ಮೃತಪಟ್ಟಿದ್ದಾರೆ. ಮರಗಳು ಬಿದ್ದು ಹಾಗೂ ಗೋಡೆಗಳು ಉರುಳಿ ಹೆಚ್ಚು ಜನ ಮೃತಪಟ್ಟಿದ್ದು, ಸಿಡಿಲಿನಿಂದಲೂ ಹಲವರು ಬಲಿಯಾಗಿದ್ದಾರೆಂದು ಹೇಳಲಾಗಿದೆ.

ಇನ್ನು, ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ 80 ಮನೆಗಳು ಹಾಗೂ ಹಲವು ಕಟ್ಟಡಗಳು ಕುಸಿದಿದೆ. ಜತೆಗೆ, ಸಾಂಭಾಲ್‌ನಲ್ಲಿ 31 ಕಟ್ಟಡಗಳಿಗೆ ಹಾನಿಯಾಗಿದ್ದು, ಒಟ್ಟಾರೆ ರಾಜ್ಯದಲ್ಲಿ 117 ಮನೆಗಳಿಗೆ ತೀವ್ರ ಹಾನಿಯಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಇನ್ನು, ಘಟನೆ ಕುರಿತು ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಹಾಗೂ ತೊಂದರೆಗೊಳಗಾದವರಿಗೆ ಶೀಘ್ರದಲ್ಲಿ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹೊಲದಲ್ಲಿ ಮಕ್ಕಳು ಬಲಿ: ಪಶ್ಚಿಮ ಬಂಗಾಳದಲ್ಲಿ 12 ಮಂದಿ ಬಲಿಯಾಗಿದ್ದು, ಈ ಪೈಕಿ ಐವರು ಮಕ್ಕಳು ಸೇರಿದ್ದು, ಇವರೆಲ್ಲರೂ ಹೊಲದಲ್ಲಿ ಮಾವು ಸಂಗ್ರಹಿಸಲು ಹೋಗಿದ್ದಾಗ ಸಿಡಿಲಿಗೆ ಬಲಿಯಾಗಿದ್ದಾರೆ. ಇನ್ನೊಂದೆಡೆ, ಆಂಧ್ರದ ಶ್ರೀಕಾಕುಳಂನಲ್ಲಿ ಸಿಡಿಲಿಗೆ 9 ಮಂದಿ ಬಲಿಯಾದರೆ, ತೆಲಂಗಾಣದಲ್ಲಿ 6 ಜನರು ಮೃತಪಟ್ಟಿದ್ದಾರೆ.

ದಿಲ್ಲಿಯಲ್ಲಿ ಇಬ್ಬರು ಬಲಿಯಾಗಿದ್ದು, 17 ಜನ ಗಾಯಗೊಂಡಿದ್ದಾರೆ. ಧೂಳಿನ ಬಿರುಗಾಳಿಯಿಂದ ವಿಮಾನ ಸಂಚಾರಕ್ಕೂ ಅಸ್ತವ್ಯಸ್ತವಾಗಿದೆ. ಭಾನುವಾರ ಸಂಜೆ ಗಂಟೆಗೆ ಸುಮಾರು 110 ಕಿ.ಮೀ ವೇಗದಲ್ಲಿ ಬೀಸಿದ ಬಿರುಗಾಳಿ ಮತ್ತು ಭಾರಿ ಮಳೆಯಿಂದ ದಿಲ್ಲಿಯಲ್ಲಿ ವಿಮಾನ, ರೈಲು ಹಾಗೂ ಮೆಟ್ರೋ ಸೇವೆ ವ್ಯತ್ಯಯಗೊಂಡು ಜನರು ಪರದಾಡಿದರು.

ಹಾಗೆ, ಬೃಹತ್‌ ಮರಗಳು ಉರುಳಿ ಬಿದ್ದ ಪರಿಣಾಮ ದಿಲ್ಲಿಯಲ್ಲಿ ನೂರಾರು ವಾಹನಗಳು ಜಖಂಗೊಂಡಿವೆ. ವಿದ್ಯುತ್‌ ಕಂಬಗಳು ಧರೆಗುರುಳಿದ್ದರಿಂದ ನಗರದ ಹಲವು ಭಾಗಗಳು ಕತ್ತಲಮಯವಾಗಿದ್ದವು.

70 ವಿಮಾನ ಮಾರ್ಗ ಬದಲು:

ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ 70 ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, 30ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬವಾಗಿದೆ. ಮೆಟ್ರೊ ಮತ್ತು ರೈಲು ಹಳಿಗಳ ಮೇಲೆ ಮರಗಳು ಬಿದ್ದ ಪರಿಣಾಮ ಹಲವು ಗಂಟೆ ಸಂಚಾರ ವ್ಯತ್ಯಯವಾಗಿತ್ತು.

ಇನ್ನೂ ಮೂರು ದಿನ ಮಳೆ: ಉತ್ತರ ಭಾರತದ ಹಲವು ಭಾಗಗಳಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Comments are closed.