ರಾಷ್ಟ್ರೀಯ

ಈಕೆಗೆ ಬರೋಬ್ಬರಿ 23 ಮಕ್ಕಳು

Pinterest LinkedIn Tumblr


ಫರಿದಾಬಾದ್: ಒಂದು ಮಗುವನ್ನು ಸಂಭಾಳಿಸುವುದೇ ಕಷ್ಟ ಎನ್ನುವ ಈ ಕಾಲದ ತಾಯಂದಿರಿಗೆ ವಿರುದ್ಧವಾಗಿ ನಿಲ್ಲುತ್ತಾಳೆ ಈ ಮಹಾತಾಯಿ. 23 ವರ್ಷದ ಯುವತಿ ಇದ್ದಾಗ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಅನಾಥ ಮಕ್ಕಳಿಗೆ ಸಾಕು ತಾಯಿಯಾಗುವ ಜವಾಬ್ದಾರಿ ಹೊತ್ತ ಮಂಜು ಬಾಲಾ ಪಂಡಾಗೀಗ 52 ವರ್ಷ. ಚಿಕ್ಕ ಪ್ರಾಯದಲ್ಲಿ ಏಕಕಾಲದಲ್ಲಿ 8-10 ಮಕ್ಕಳ ಜವಾಬ್ದಾರಿ ಹೊತ್ತ ಆಕೆಯ ಮಧ್ಯವಯಸ್ಸಿನಲ್ಲೂ ಮಡಿಲಲ್ಲಿವೆ ಬರೋಬ್ಬರಿ 23 ಮಕ್ಕಳು.

ಪ್ರತಿ ದಿನ ಬೆಳಿಗ್ಗೆ 10 ಬಾಕ್ಸ್ ಟಿಫಿನ್ ತಯಾರಿಸಬೇಕಿತ್ತು. ಅದರ ಜತೆಗೆ ಊಟ ಸಿದ್ಧಪಡಿಸಬೇಕಿತ್ತು, ಮೊದಮೊದಲು ಒಂದೇ ಸಲ 10 ಮಕ್ಕಳ ಜವಾಬ್ದಾರಿ ಹೊತ್ತುಕೊಳ್ಳುವುದು ಹೇಗೆ ಎಂಬ ಚಿಂತೆ ಇತ್ತು, ಎಂದು ಅವರೇ ಒಪ್ಪಿಕೊಳ್ಳುತ್ತಾರೆ. ಮತ್ತೀಗ ಬರೋಬ್ಬರಿ 20 ವರ್ಷಗಳು ಸಂದಿವೆ. ತಾಯ್ತನ ಸವಾಲೆಂದು ನನಗನ್ನಿಸುತ್ತಲೇ ಇಲ್ಲ, ನನ್ನ ಮಕ್ಕಳೇ ನನ್ನ ಬದುಕು. ಅವರ ಸಂತೋಷ ಮತ್ತು ನೋವನ್ನು ನಾವು ಹಂಚಿಕೊಳ್ಳುತ್ತೇನೆ. ಎನ್ನುತ್ತಾರೆ ಅವರು.

ಫರಿದಾಬಾದ್‌ನ ಹಳ್ಳಿಯೊಂದರಲ್ಲಿ ವಾಸಿಸುವ ಅವರಿಗಿಂದು ವಿಶ್ವ ತಾಯಂದಿರ ದಿನದ ಸಂಭ್ರಮ. ಕಾಲೇಜಿಗೆ ಹೋಗುತ್ತಿರುವ ತಮ್ಮ ಮಗ ಕಳುಹಿಸಿರುವ ಮದರ್ ಡೇ ಕಾರ್ಡ್‌ನ್ನು ಹೆಮ್ಮೆಯಿಂದ ತೋರಿಸಿ ನಗುತ್ತಾರೆ ಮಂಜು ಬಾಲಾ. ಆ ಕಾರ್ಡ್‌ನಲ್ಲೊಂದು ಮನೆ ಇದ್ದು, ಅದಕ್ಕಿರುವ ಕಿಟಕಿಗಳು ತೆರೆಯುತ್ತಿದ್ದಂತೆ ‘ ಹ್ಯಾಪಿ ಮದರ್ಸ್ ಡೇ ಮಾಮ್ , ಐ ಲವ್ ಯೂ’ ಎಂಬ ಪದಗಳು ಕಾಣಿಸುತ್ತವೆ.

ವಿಭಿನ್ನ ಹಿನ್ನೆಲೆಯುಳ್ಳ ಅನಾಥ ಮಕ್ಕಳನ್ನು ಸಂಭಾಳಿಸುವುದು ನಿಜಕ್ಕೂ ಒಂದು ಸವಾಲಿನ ಕೆಲಸವೇ. ಕೆಲವರಿಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ನನ್ನ ಇತರ ಮಕ್ಕಳು ಪ್ರೌಢತೆಯನ್ನು ತೋರಿಸುತ್ತಾರೆ. ನನ್ನ ಸಂದಿಗ್ಧತೆಯನ್ನು ಅರ್ಥ ಮಾಡಿಕೊಳ್ಳುವ ಅವರು ಪರವಾಗಿಲ್ಲ ಅಮ್ಮ, ಅವರಿಗೆ ಹೆಚ್ಚಿನ ಸಮಯ ನೀಡಿ ಎನ್ನುತ್ತಾರೆ. ಇಂತಹ ಮಕ್ಕಳನ್ನು ಪಡೆದಿರುವುದು ಬಹಳ ಹೆಮ್ಮೆಯ ಸಂಗತಿ ಎನ್ನುತ್ತಾರೆ ಬಾಲಾ.

ಬೆಳೆದ ಮಕ್ಕಳ ಅಗಲಿಕೆ ಬಹಳ ನೋವನ್ನುಂಟು ಮಾಡುತ್ತದೆ. ಆದರೆ ಹೆಚ್ಚಿನ ಓದಿಗಾಗಿ ದೂರ ದೂರದ ಊರುಗಳಿಗೆ ತೆರಳುವ ಅವರು ಆಗಾಗ ಬಂದು ಭೇಟಿಯಾಗಿ ಹೋಗುತ್ತಾರೆ, ಅದು ನನಗೆ ಸಮಾಧಾನವನ್ನು ನೀಡುತ್ತದೆ ಎಂದು ಕಣ್ಣು ತುಂಬಿಸಿಕೊಂಡು ಹೇಳುತ್ತಾರೆ ಮಹಾತಾಯಿ.

ತಮ್ಮನ್ನು ಹುಟ್ಟಿಸಿದವರು ಯಾರೆಂದು ತಿಳಿಯದ ಅನಾಥ ಮಕ್ಕಳಿಗೆ ವಾತ್ಸಲ್ಯವನ್ನೆರೆದು ಬದುಕು ನೀಡುವ ಇಂಥ ಮಹಾತಾಯಿಯರೇ ನಿಜವಾದ ಅಮ್ಮಂದಿರಲ್ಲವೇ?

Comments are closed.