ಹೊಸದಿಲ್ಲಿ: ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶದ ಭಾಗಗಳಲ್ಲಿ ಭಾನುವಾರ ಹಾಗೂ ಸೋಮವಾರದಂದು ಬಿರುಗಾಳಿ ಸಹಿತ ಗುಡುಗು- ಸಿಡಿಲಿನಿಂದ ಕೂಡಿದ ಭಾರಿ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮೆಡಿಟರೇನಿಯನ್ ಸಮುದ್ರದಲ್ಲಿಉಂಟಾಗಿರುವ ಹವಾಮಾನ ವೈಪರೀತ್ಯದಿಂದ ಭಾರತದ ಉತ್ತರದ ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶ ಸೇರಿದಂತೆ ಅನೇಕ ಭಾಗಗಳಿಗೂ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗುವ ಸಂಭವವಿದೆ.
ಉತ್ತರ ಪ್ರದೇಶ, ಅಸ್ಸಾಂ,ಮೇಘಾಲಯ, ನಾಗಾಲ್ಯಾಂಡ್, ಮನಿಪುರ, ತ್ರಿಪುರ ಹಾಗೂ ಪಶ್ಚಿಮ ಬಂಗಾಳ ಕೆಲ ಭಾಗ ಹಾಗೂಒರಿಸ್ಸಾದ ಪ್ರದೇಶದಲ್ಲಿ ಪ್ರತಿ ಗಂಟೆಗೆ 50-70ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಇಲಾಖೆ ತಿಳಿಸಿದೆ.
ಪಂಜಾಬ್, ಹರಿಯಾಣ, ಛಂಡೀಗಡ, ದೆಹಲಿ, ಉತ್ತರ ಪ್ರದೇಶದ ಪಶ್ಚಿಮ ಭಾಗ, ವಿದರ್ಭ, ಚತ್ತೀಸ್‌ಗಡ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶದ ಉತ್ತರ ಕರಾವಳಿ ಪ್ರದೇಶ, ಕರ್ನಾಟಕದ ದಕ್ಷಿಣ ಒಳನಾಡು, ತಮಿಳುನಾಡು, ಪುದುಚೇರಿ, ಕೇರಳ ಸೇರಿದಂತೆ ಅನೇಕ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಇಲಾಖೆ ಹೇಳಿದೆ.
ಕಳೆದ ವಾರ ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ಇನ್ನಿತರ ಭಾಗಗಳಿಗೆ ಮರಳ ಸುನಾಮಿ ಅಪ್ಪಳಿಸಿ, ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿ, 200ಕ್ಕೂ ಹೆಚ್ಚು ಜನರರು ಗಾಯಗೊಂಡಿದ್ದರು.
Comments are closed.