ರಾಷ್ಟ್ರೀಯ

8.64 ಲಕ್ಷ ರೂ ಕರೆಂಟ್ ಬಿಲ್: ಆತ್ಮಹತ್ಯೆಗೆ ಶರಣಾದ ತರಕಾರಿ ವ್ಯಾಪಾರಿ

Pinterest LinkedIn Tumblr


ಔರಂಗಾಬಾದ್‌: ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಕಳುಹಿಸಿದ ವಿದ್ಯುತ್‌ ಬಿಲ್‌ ನೋಡಿ ಆಘಾತಗೊಂಡ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭರತ್‌ ನಗರದ ನಿವಾಸಿಯಾಗಿರುವ 40 ವರ್ಷದ ತರಕಾರಿ ವ್ಯಾಪಾರಿಯೊಬ್ಬರಿಗೆ ಬಂದ ವಿದ್ಯುತ್‌ ಬಿಲ್‌ ಬರೋಬ್ಬರಿ 8.64 ಲಕ್ಷ ರೂ…! ಇದನ್ನು ನೋಡಿಯೇ ಶಾಕ್‌ ಹೊಡೆದಂತಾದ ಅವರು ಗುರುವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೆ ಮುನ್ನ ವ್ಯಕ್ತಿ ಬರೆದಿಟ್ಟ ಚೀಟಿಯಲ್ಲಿ (ಡೆತ್‌ನೋಟ್‌) ಈ ವಿಷಯ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಪ್ಪಾಗಿ ಬಿಲ್‌ ಕಳುಹಿಸಿದ ಪ್ರಮಾದಕ್ಕೆ ಸಂಬಂಧಿತ ಗುಮಾಸ್ತನೊಬ್ಬನನ್ನು ಎಂಎಸ್‌ಇಡಿಸಿಎಲ್‌ ಅಮಾನತುಗೊಳಿಸಿದೆ.

ಜಗನ್ನಾಥ್‌ ಶಿಲ್ಕೆ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಎರಡು ಕೊಠಡಿಗಳ ಟಿನ್‌ ಶೆಡ್‌ನಲ್ಲಿ ಕಳೆದ 20 ವರ್ಷಗಳಿಂದ ಅವರ ಕುಟುಂಬ ಜೀವನ ನಡೆಸುತ್ತಿದೆ. ಇಂಥ ಮನೆಯಲ್ಲಿ 55,519 ಯುನಿಟ್‌ ವಿದ್ಯುತ್ ಬಳಸಲಾಗಿದೆ ಎಂದು ನಮೂದಿಸಿರುವ ವಿದ್ಯುತ್ ವಿತರಣಾ ಕಂಪನಿ 8.64,781 ರೂ.ಗಳ ಬಿಲ್‌ ಕಳುಹಿಸಿದೆ.

ಗರ್ಖೇಡಾ ಸ್ಟೇಷನ್‌ನ ಸೆಕ್ಷನ್‌ ಎಂಜಿನಿಯರ್‌ ಒಬ್ಬರು ಮೀಟರ್‌ ರೀಡಿಂಗ್‌ 6,117.8 ಕಿಲೋ ವ್ಯಾಟ್‌ ಬದಲು ಅನ್ನು 61,178 ಕಿಲೋ ವ್ಯಾಟ್‌ ಎಂದು ನಮೂದಿಸಿದ್ದೇ ಈ ರೀತಿ ಬಿಲ್ಲಿಂಗ್‌ ಅವಾಂತರಕ್ಕೆ ಕಾರಣವಾಯಿತು. ಅಲ್ಲದೆ ಇತ್ತೀಚೆಗೆ ಶಿಲ್ಕೆ ಅವರ ವಿದ್ಯುತ್ ಮೀಟರ್‌ನ ಬದಲಿಸಲಾಗಿತ್ತು ಎಂದು ಎಂಎಸ್‌ಇಡಿಸಿಎಲ್‌ ಪ್ರಕಟಣೆ ಸ್ಪಷ್ಟಪಡಿಸಿದೆ.

ಪುಂಡಲೀಕನಗರ ಪೊಲೀಸ್ ಠಾಣೆಯಲ್ಲಿ, ಸದ್ಯಕ್ಕೆ ಇದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ.

Comments are closed.