ರಾಷ್ಟ್ರೀಯ

ಪರೀಕ್ಷೆ ಬರೆಯುವ ಸಮಯದಲ್ಲಿ ಬ್ರಾ ಕಳಚುವಂತೆ ಒತ್ತಾಯ: ವಿದ್ಯಾರ್ಥಿನಿಯಿಂದ ದೂರು

Pinterest LinkedIn Tumblr


ಪಾಲಕ್ಕಾಡ್‌, ಕೇರಳ : ಕಳೆದ ಮೇ 6ರಂದು ಇಲ್ಲಿ ನಡೆದಿದ್ದ “ನ್ಯಾಶನಲ್‌ ಎಲಿಜಿಲಿಬಿಲಿಟಿ ಕಮ್‌ ಎಂಟ್ರೆನ್ಸ್‌ ಟೆಸ್ಟ್‌ (ನೀಟ್‌ ಪರೀಕ್ಷೆ) ಎದುರಿಸುವಾಗ ನನಗೆ ಬ್ರಾ ಬಿಚ್ಚುವಂತೆ ಬಲವಂತಪಡಿಸಲಾಯಿತು” ಎಂದು ವಿದ್ಯಾರ್ಥಿನಿಯೋರ್ವಳು ಆರೋಪಿಸಿದ್ದಾಳೆ.

“ನಾನು ಪರೀಕ್ಷೆಯನ್ನು ಬರೆಯುವಾಗ ಅಲ್ಲಿದ್ದ ಬಾಹ್ಯ ಪುರುಷ ವೀಕ್ಷಕರೊಬ್ಬರು ನನ್ನನ್ನು ಅನುಚಿತವಾಗಿ ದುರುಗುಟ್ಟಿ ನೋಡಿ ಬ್ರಾ ಕಳಚುವಂತೆ ಬಲವಂತಪಡಿಸಿದ” ಎಂದು ಸಂತ್ರಸ್ತ ವಿದ್ಯಾರ್ಥಿನಿಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾಳೆ. ಪೊಲೀಸರು ಆಕೆಯ ದೂರಿನ ಪ್ರಕಾರ ಆರೋಪಿ ಪರೀಕ್ಷಾ ವೀಕ್ಷಕನ ವಿರುದ್ಧ ಐಪಿಸಿ ಸೆ.509 ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.

‘ಹುಡುಗಿಯರ ಬ್ರಾ ಗಳಿಗೆ ಮೆಟಲ್‌ ಹುಕ್‌ ಇರುವುದರಿಂದ ಅದು ಸಹಜವಾಗಿಯೇ ಮೆಟಲ್‌ ಡಿಟೆಕ್ಟರ್‌ನಲ್ಲಿ ಗುರುತಿಸಲ್ಪಡುತ್ತದೆ. ಇಷ್ಟಕ್ಕೇ ಶಂಕಿತರಾದ ಪರೀಕ್ಷಾ ವೀಕ್ಷಕರು ಕೊಪ್ಪದ ಲಯನ್ಸ್‌ ಸ್ಕೂಲ್‌ನಲ್ಲಿ ನಡೆದಿದ್ದ ನೀಟ್‌ ಪರೀಕ್ಷೆಯಲ್ಲಿ ಹುಡುಗಿಯರಿಗೆ ಬ್ರಾ ಬಿಚ್ಚುವಂತೆ ಬಲವಂತಪಡಿಸಲಾಯಿತು’ ಎನ್ನಲಾಗಿದ್ದು ಕೆಲವು ಹುಡುಗಿಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

“ನೀಟ್‌ ಪರೀಕ್ಷೆಯ ಉದ್ದಕ್ಕೂ ಹಾಲ್‌ನೊಳಗಿನ ಪುರುಷ ವೀಕ್ಷಕ ನನ್ನನ್ನು ಅನುಚಿತವಾಗಿ ದುರುಗುಟ್ಟಿ ನೋಡುತ್ತಿದ್ದುದರಿಂದ ನನಗೆ ನಿರಾಳವಾಗಿ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗಲಿಲ್ಲ’ ಎಂದು ಪಾಲಕ್ಕಾಡ್‌ ವಿದ್ಯಾರ್ಥಿನಿ ದೂರಿದ್ದಾಳೆ.

“ನನ್ನ ಅಕ್ಕನ ಬಳಿ ಕನಿಷ್ಠ ಮೂರು ಬಾರಿ ಪರೀಕ್ಷಾ ವೀಕ್ಷಕ ಬಂದಿದ್ದಾನೆ; ಆಕೆಯ ಮುಖವನ್ನು ನೋಡದೆ ಆಕೆಯ ಎದೆಯ ಮೇಲೆಯ ತನ್ನ ಕಣ್ಣನ್ನು ನೆಟ್ಟಿದ್ದಾನೆ. ಇದರಿಂದ ಮುಜುಗರಕ್ಕೆ ಗುರಿಯಾದ ನನ್ನ ಅಕ್ಕ ತನ್ನ ಕೈಯಲ್ಲಿದ್ದ ಪ್ರಶ್ನೆ ಪತ್ರಿಕೆಯಿಂದ ತನ್ನ ಎದೆ ಮುಚ್ಚಿಕೊಂಡಿದ್ದಾಳೆ. ಹಾಗಾಗಿ ಅವಳಿಗೆ ನಿರಾತಂಕವಾಗಿ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗಿಲ್ಲ’ ಎಂದು ಸಂತ್ರಸ್ತ ವಿದ್ಯಾರ್ಥಿನಿಯ ಸಹೋದರಿಯು ಮಾಧ್ಯಮಕ್ಕೆ ತಿಳಿಸಿದ್ದಾಳೆ.

ಪಾಲಕ್ಕಾಡ್‌ ವಿದ್ಯಾರ್ಥಿನಿಯ ದೂರನ್ನು ಸ್ವೀಕರಿಸಿ ಕೇಸು ದಾಖಲಿಸಿಕೊಂಡು ತನಿಖೆಗೆ ಮುಂದಾಗಿರುವ ಪೊಲೀಸರು, ತಾವು ಈ ಪರೀಕ್ಷೆ ಬರೆದ ಇತರ ವಿದ್ಯಾರ್ಥಿನಿಯರನ್ನೂ ಪ್ರಶ್ನಿಸಿ ಮಾಹಿತಿ ಕಲೆಹಾಕುವುದಾಗಿ ಹೇಳಿದ್ದಾರೆ.

ಕೇರಳದಲ್ಲಿ ನೀಟ್‌ ಪರೀಕ್ಷೆಗೆ ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಕುಳಿತಿದ್ದಾರೆ.

Comments are closed.