ರಾಷ್ಟ್ರೀಯ

ನಮಾಜ್‌ ಮಾಡುವುದು ಮಸೀದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲ: ಖಟ್ಟರ್‌

Pinterest LinkedIn Tumblr


ಗುರುಗ್ರಾಮ: ನಮಾಜ್‌ ಅನ್ನು ಸಾರ್ವಜನಿಕ ಸ್ಥಳಗಳಲ್ಲಿ ಮಾಡುವ ಬದಲು ಮಸೀದಿ ಅಥವಾ ಈದ್ಗಾ ಒಳಗೇ ಮಾಡಬೇಕು ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್‌ ಹೇಳಿದ್ದಾರೆ.

ಗುರುಗ್ರಾಮದಲ್ಲಿ ಇತ್ತೀಚೆಗೆ ಶುಕ್ರವಾರದ ಪ್ರಾರ್ಥನೆಗಳಿಗೆ ಅಡ್ಡಿಪಡಿಸಿದ ಘಟನೆಗಳ ಕುರಿತ ಪ್ರಶ್ನೆಗೆ ಉತ್ತರಿಸುತ್ತ ಖಟ್ಟರ್‌ ಈ ಪ್ರತಿಕ್ರಿಯೆ ನೀಡಿದರು. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಮತ್ತು ಬಿಜೆಪಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಬಲಪಂಥೀಯ ಸಂಘಟನೆಗಳು ಆಗ್ರಹಿಸಿದ ಬಳಿಕ ಸಿಎಂ ಖಟ್ಟರ್‌ ಈ ಹೇಳಿಕೆ ನೀಡಿದ್ದಾರೆ.

‘ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ನಮಾಜ್‌ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ನಮಾಜನ್ನು ಮಸೀದಿ ಅಥವಾ ಈದ್ಗಾ ಒಳಗೆ ಮಾಡಬೇಕು. ಅಲ್ಲಿ ಸ್ಥಳಾವಕಾಶದ ಕೊರತೆಯಿದ್ದರೆ, ಮುಸ್ಲಿಮರು ತಮ್ಮ ಖಾಸಗಿ ಸ್ಥಳಗಳಲ್ಲಿ ನಮಾಜ್‌ ಮಾಡಿಕೊಳ್ಳಲಿ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರವಾಗಿ ಖಟ್ಟರ್‌ ತಿಳಿಸಿದರು.

‘ಸಾರ್ವಜನಿಕರಿಂದ ಆಕ್ಷೇಪವಿಲ್ಲದಿದ್ದರೆ ನಮ್ಮದೇನೂ ತಕರಾರಿಲ್ಲ. ಆದರೆ ಒಂದು ಗುಂಪು ಅಥವಾ ಒಬ್ಬ ವ್ಯಕ್ತಿ ಆಕ್ಷೇಪಿಸಿದರೆ ಅದನ್ನು ಪರಿಗಣಿಸಲೇಬೇಕಾಗುತ್ತದೆ. ಈ ವಿಚಾರದಲ್ಲಿ ನಿಗಾ ಇರಿಸಲಾಗುತ್ತದೆ’ ಎಂದು ಮುಖ್ಯಮಂತ್ರಿ ಹೇಳಿದರು.

ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆ ಸರಕಾರದ ಕರ್ತವ್ಯ. ಅದನ್ನು ನಾವು ಮಾಡುತ್ತೇವೆ ಎಂದು ಖಟ್ಟರ್‌ ನುಡಿದರು.

ಪ್ರಾರ್ಥನೆಗಳನ್ನು ನಿಲ್ಲಿಸುತ್ತೇವೆ ಎಂದು ಹೇಳಿಲ್ಲ: ಸಿಎಂ

ನಮಾಜ್‌ ಮಾಡುವುದನ್ನೇ ನಿಲ್ಲಿಸುತ್ತೇವೆ ಎಂದು ನಾವೆಲ್ಲೂ ಹೇಳಿಲ್ಲ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌ ಸ್ಪಷ್ಟನೆ ನೀಡಿದ್ದಾರೆ. ‘ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುವುದರಿಂದ ಹಲವರಿಗೆ ತೊಂದರೆಯಾದರೆ ಸರಕಾರಕ್ಕೆ ಮಾಹಿತಿ ನೀಡಬಹುದು. ಕಾನೂನು ಮತ್ತು ಸುವ್ಯಸ್ಥೆಯ ಪಾಲನೆ ಸರಕಾರ ಹಾಗೂ ಪೊಲೀಸರ ಕರ್ತವ್ಯ’ ಎಂದು ಅವರು ಸ್ಪಷ್ಟಪಡಿಸಿದರು.

ಮೊನ್ನೆ ಶುಕ್ರವಾರ ಕೆಲವು ಗುಂಪುಗಳು ನಗರದಲ್ಲಿ ‘ಜೈ ಶ್ರೀರಾಮ್‌’ ಮತ್ತು ‘ಬಾಂಗ್ಲಾದೇಶಿಗಳೇ ವಾಪಸ್‌ ಹೋಗಿ’ ಎಂದು ಘೋಷಣೆಗಳನ್ನು ಕೂಗುತ್ತ ಕೆಲವು ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುವವರನ್ನು ಬೆನ್ನಟ್ಟಿಕೊಂಡು ಹೋಗಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್‌ ಸಲ್ಲಿಸುವ ಮೂಲಕ ‘ಲ್ಯಾಂಡ್‌ ಜಿಹಾದ್‌’ ನಡೆಸುತ್ತಿದ್ದಾರೆ ಎಂದು ಪ್ರತಿಭಟನೆಕಾರರು ಆರೋಪಿಸಿದ್ದರು.

ಮುಖ್ಯಮಂತ್ರಿಗಳ ಹೇಳಿಕೆಯನ್ನು ಬಲಪಂಥೀಯ ಸಂಘಟನೆಗಳು ಸ್ವಾಗತಿಸಿವೆ. ಅಖಿಲ ಭಾರತೀಯ ಹಿಂದೂ ಕ್ರಾಂತಿ ದಳದ ರಾಷ್ಟ್ರೀಯ ಸಂಚಾಲಕ ರಾಜೀವ್‌ ಮಿತ್ತಲ್‌, ಇದು ಬರೀ ಗುರುಗ್ರಾಮದ ಸಮಸ್ಯೆಯಲ್ಲ; ಇಡೀ ದೇಶಕ್ಕೇ ಸಂಬಂಧಿಸಿದ ಸಮಸ್ಯೆ ಎಂದು ಹೇಳಿದ್ದಾರೆ.

‘ಗುರುಗ್ರಾಮದ ಆಡಳಿತ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಇಡೀ ದೇಶವೇ ಎದುರು ನೋಡುತ್ತಿದೆ. ಮುಸ್ಲಿಂ ದೇಶಗಳಲ್ಲೂ ತೆರೆದ ಸ್ಥಳಗಳಲ್ಲಿ ನಮಾಜ್‌ಗೆ ಅನುಮತಿಯಿಲ್ಲ. ಕಾನೂನು ಉಲ್ಲಂಘನೆಗೆ ದಂಡವನ್ನೂ ವಿಧಿಸಲಾಗುತ್ತದೆ’ ಎಂದು ಅವರು ತಿಳಿಸಿದರು.

ಗುರುಗ್ರಾಮ ಜಿಲ್ಲೆಯಲ್ಲಿ ಬಹಿರಂಗ ನಮಾಜ್‌ ಮಾಡುತ್ತಿರುವ 115 ಸ್ಥಳಗಳನ್ನು ಗುರುತಿಸಲಾಗಿದೆ. ಸುಮಾರು 6 ಲಕ್ಷ ಮುಸ್ಲಿಂ ಜನಸಂಖ್ಯೆಗೆ ಕೆಲವೇ ಮಸೀದಿಗಳಿರುವುದರಿಂದ ನಮಾಜ್‌ಗೆ ಸ್ಥಳಾವಕಾಶ ಸಾಲುತ್ತಿಲ್ಲ ಎಂದು ಮುಸ್ಲಿಂ ಗುಂಪುಗಳು ಹೇಳುತ್ತಿವೆ.

ಮುಸ್ಲಿಮರಿಗೆ ತಾತ್ಕಾಲಿಕ ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಕೆಲವು ಸ್ಥಳಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಪ್ರಾರ್ಥನೆಯನ್ನು ನಿಲ್ಲಿಸುವುದು ಸಮಸ್ಯೆಗೆ ಪರಿಹಾರವಲ್ಲ; ಆದರೆ ರಸ್ತೆ ಬದಿಗಳಲ್ಲಿ ನಮಾಜ್‌ ನಡೆಸುವುದರಿಂದ ಸಂಚಾರ ದಟ್ಟಣೆ ಮತ್ತು ಇತರ ಸಮಸ್ಯೆಗಳು ಉಂಟಾಗುತ್ತವೆ ಎಂದು ಜಿಲ್ಲಾಧಿಕಾರಿ ಡಿ.ಸುರೇಶ್‌ ತಿಳಿಸಿದರು.

Comments are closed.