ಹೊಸದಿಲ್ಲಿ : “ಕೈಯಲ್ಲಿ ಚೀಟಿ ಹಿಡಿದುಕೊಳ್ಳದೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಮಾಡಿರುವ ಸಾಧನೆಯ ಬಗ್ಗೆ ನಿಮಗೆ ತಿಳಿದಿರುವ ಹಿಂದಿ, ಇಂಗ್ಲಿಷ್ ಅಥವಾ ಯಾವುದೇ ಭಾಷೆಯಲ್ಲಿ , ಬೇಕಿದ್ದರೆ ನಿಮ್ಮ ತಾಯಿ ಸೋನಿಯಾ ಗಾಂಧಿ ಅವರ ಮಾತೃ ಭಾಷೆಯಲ್ಲಾದರೂ ಸರಿ, ಹದಿನೈದು ನಿಮಿಷಗಳ ಮಾತನಾಡಿ ತೋರಿಸಿ; ಆಗಲೇ ಕರ್ನಾಟಕದ ಜನರು ನಿಮ್ಮ ಬಗ್ಗೆ ಒಂದು ಅಭಿಪ್ರಾಯಕ್ಕೆ ಬರುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಒಡ್ಡಿರುವ ಸವಾಲನ್ನು ಸ್ವೀಕರಿಸುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ಅವರು ಸಲಹೆ ನೀಡಿದ್ದಾರೆ.
“ನೀವು ಪ್ರಧಾನಿ ನರೇಂದ್ರ ಮೋದಿ ಅವರ ಈ ಸವಾಲನ್ನು ಸ್ವೀಕರಿಸಿದರೆ ಅನಂತರದಲ್ಲಿ ನಾವು ಎಂಟು ವರ್ಷದ ಬಾಲೆಯ ಕಥುವಾ ರೇಪ್ ಆ್ಯಂಡ್ ಮರ್ಡರ್ ಕೇಸ್ ಯಾಕೆ ಒಂದು ಸಣ್ಣ ಘಟನೆ ಎಂಬ ಬಗ್ಗೆ ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಬಹುದಾಗಿದೆ’ ಎಂದು ಉಮರ್ ಅಬ್ದುಲ್ಲ ಅವರು ರಾಹುಲ್‌ಗೆ ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಿನ್ನೆ ಮಂಗಳವಾರ ಕರ್ನಾಟಕದ ಚಾಮರಾಜ ಜಿಲ್ಲೆಯ ಸಂತೆಮಾರನಹಳ್ಳಿಯಲ್ಲಿ ನಡೆದಿದ್ದ ಸಾರ್ವಜನಿಕ ಚುನಾವಣಾ ಪ್ರಚಾರ ಭಾಷಣದಲ್ಲಿ ರಾಹುಲ್‌ಗೆ ಈ ಬಹಿರಂಗ ಸವಾಲು ಒಡ್ಡಿದ್ದರು.
ಪ್ರಧಾನಿ ಮೋದಿ ಅವರ ಸವಾಲನ್ನು ಸ್ವೀಕರಿಸುವಂತೆ ರಾಹುಲ್‌ಗೆ ಉಮರ್ ಸಲಹೆ ನೀಡಿರುವ ನಡುವೆಯೇ ಕಥುವಾ ರೇಪ್ ಆ್ಯಂಡ್ ಮರ್ಡರ್ ಕೇಸನ್ನು ಜಮ್ಮು ಕಾಶ್ಮೀರದ ಪಿಡಿಪಿ – ಬಿಜೆಪಿ ಸರಕಾರ ಮುಚ್ಚಿ ಹಾಕುವ ಯತ್ನದಲ್ಲಿ ನಿರ್ವಹಿಸುತ್ತಿರುವ ರೀತಿಯನ್ನು ಕಟುವಾಗಿ ಖಂಡಿಸಿದರು.
ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಕರಿಸಿದ ಒಡನೆಯೇ ಬಿಜೆಪಿಯ ಕವೀಂದರ್ ಗುಪ್ತಾ ಅವರು “ಕಥುವಾ ರೇಪ್ ಮತ್ತು ಕೊಲೆ ಪ್ರಕರಣ ಒಂದು ಅತ್ಯಂತ ಸಣ್ಣ ಘಟನೆ; ಮಾಧ್ಯಮ ಇದನ್ನು ಅನಗತ್ಯವಾಗಿ ಭಾರೀ ದೊಡ್ಡ ಘಟನೆಯನ್ನಾಗಿ ಮಾಡಿದೆ ‘ ಎಂದು ಹೇಳಿದ್ದರು.
-ಉದಯವಾಣಿ
Comments are closed.