ರಾಷ್ಟ್ರೀಯ

ಮೋದಿ ಸರ್ಕಾರದ ಮತ್ತೊಂದು ಮೈಲಿಗಲ್ಲು: ಭಾರತದ ಎಲ್ಲಾ ಗ್ರಾಮಗಳಿಗೂ ತಲುಪಿದ ವಿದ್ಯುತ್ ಸಂಪರ್ಕ!

Pinterest LinkedIn Tumblr

ನವದೆಹಲಿ: ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರವೂ ಭಾರತದಾದ್ಯಂತ ಒಟ್ಟಾರೆ 18 ಸಾವಿರ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಇಂತಹ ಹಳ್ಳಿಗಳಿಗೆ ತ್ವರಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆದ್ಯತೆಯ ವಿಷಯಗಳಲ್ಲಿ ಪ್ರಮುಖವಾಗಿತ್ತು. ಈಗ ಮೋದಿ ಸರ್ಕಾರ ತನ್ನ ಯೋಜನೆಯನ್ನು ಬಹುತೇಕ ಪೂರ್ಣಗೊಳಿಸಿದ್ದು, ಏ.28 ರಂದು ಗುರಿ ತಲುಪಿದೆ.

ಮಣಿಪುರದ ಸೇನಾಪತಿ ಜಿಲ್ಲೆಯ ಲೀಸಾಂಗ್ ಗ್ರಾಮಕ್ಕೆ ಏ.28 ರ ಸಂಜೆ 5:30 ಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ರಾಷ್ಟ್ರೀಯ ಪವರ್ ಗ್ರಿಡ್ ವ್ಯಾಪ್ತಿಗೆ ಒಳಪಟ್ಟ ಕೊನೆಯ ಗ್ರಾಮವಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಏ.28 ರಂದು ಭಾರತದ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ತಲುಪಿಸುವ ಗುರಿಯನ್ನು ಮುಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಪೂರೈಕೆ ಇದೆಯೇ ಎಂಬುದನ್ನು ಗಮನಿಸಲು ಸರ್ಕಾರಿ ಸ್ವಾಮ್ಯದ ಗ್ರಾಮೀಣ ವಿದ್ಯುದೀಕರಣ ನಿಗಮ(ಆರ್ ಇಸಿ) ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿತ್ತು. ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯ ಭಾಗವಾಗಿ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ತಲುಪಿದ್ದು, ಸರ್ಕಾರದ ದತ್ತಾಂಶದ ಪ್ರಕಾರ ಲಭ್ಯವಿರುವ ಭಾರತದ ಎಲ್ಲಾ 597,464 ಗ್ರಾಮಗಳೂ ಈಗ ವಿದ್ಯುತ್ ಸಂಪರ್ಕ ಹೊಂದಿವೆ.

ವಿದ್ಯುತ್ ಸಂಪರ್ಕದಿಂದ ವಂಚಿತವಾಗಿದ್ದ 18, 452 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡುವ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗಾಗಿ ಎನ್ ಡಿ ಎ ಸರ್ಕಾರ 75,893 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿತ್ತು, ಯೋಜನೆ ಕೈಗೆತ್ತಿಕೊಂಡ ನಂತರ ವಿದ್ಯುತ್ ಸಂಪರ್ಕವೇ ಇಲ್ಲದಿದ್ದ 1275 ಗ್ರಾಮಗಳು ಮತ್ತೆ ಪತ್ತೆಯಾಗಿದ್ದವು. ಏ.28 ರ ವೇಳೆಗೆ ಎಲ್ಲಾ ವಿದ್ಯುತ್ ವಂಚಿತ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ತಲುಪಿಸಲಾಗಿದೆ.

Comments are closed.