ರಾಷ್ಟ್ರೀಯ

ಅಭಿವೃದ್ಧಿಯೇ ನಮ್ಮ ಏಕೈಕ ಅಜೆಂಡಾ: ಬಿಜೆಪಿ ನಾಯಕರು, ಅಭ್ಯರ್ಥಿಗಳೊಂದಿಗೆ ಮೋದಿ ಸಂವಾದ; ಕನ್ನಡದಲ್ಲೇ ಮಾತು ಆರಂಭ

Pinterest LinkedIn Tumblr

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವತೆಯೇ ಬಿಜೆಪಿ ನಾಯಕರು, ಅಭ್ಯರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದು, ಅಭಿವೃದ್ಧಿಯೇ ನಮ್ಮ ಸರ್ಕಾರದ ಏಕೈಕ ಅಜೆಂಡಾ ಎಂದು ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಜೆಪಿ ನಾಯಕರು ಮತ್ತು ಅಭ್ಯರ್ಥಿಗಳೊಂದಿಗೆ ಮಾತನಾಡಿದ ಪ್ರಧಾನಿಮೋದಿ, ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕೆಲ ಸಲಹೆಗಳನ್ನು ನೀಡಿದರು. ಆರಂಭದಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ಮೋದಿ, ಎಲ್ಲರಿಗೂ ನಮಸ್ಕಾರ..ನಾನು ಕನ್ನಡ ಕಲಿತಿಲ್ಲ ಹಾಗಾಗಿ ಇಂಗ್ಲೀಷ್​ ಅಥವಾ ಹಿಂದಿಯಲ್ಲಿ ಸಂವಾದವನ್ನು ಮುಂದುವರೆಸುತ್ತೇನೆ.. ಆದರೆ ನನ್ನನ್ನೂ ಕನ್ನಡಿಗ ಎಂದು ಪರಿಗಣಿಸಿ ನಮ್ಮನ್ನು ಬೆಂಬಲಿಸಿ ಎಂದು ಹೇಳಿದರು.

ಮೊದಲು ಮಾತನಾಡಿದ ಮೋದಿ ಅವರು ರಾಜ್ಯದಲ್ಲಿ ಅಭಿವೃದ್ಧಿ ಮತ್ತು ವಿಕಾಸವನ್ನು ಗುರಿಯಾಗಿಸಿಕೊಂಡಿದ್ದೇವೆ. ಆದರೆ ಬೇರೆ ಪಕ್ಷಗಳು ಅಭಿವೃದ್ಧಿ ಕುರಿತು ಮಾತನಾಡುತ್ತಿಲ್ಲ. ಮುಖ್ಯವಾಗಿ ಬೂತ್​ ಮಟ್ಟದ ಕಾರ್ಯಕರ್ತರೇ ನಮ್ಮ ಪಕ್ಷದ ಬಲ. ಇಡೀ ವಿಶ್ವವೇ ಎದುರಾದರೂ ನಮ್ಮ ಸಂಘಟನೆಯ ಶಕ್ತಿ ಕುಗ್ಗಿಸಲು ಸಾಧ್ಯವಿಲ್ಲ. ರಾಜ್ಯದ ರೈತರ ಆತ್ಮಹತ್ಯೆಗೆ ಕಾರಣಗಳು ಹಾಗೂ ಅದಕ್ಕೆ ಪರಿಹಾರ ಕ್ರಮಗಳನ್ನೂ ಪ್ರಧಾನಿ ಮೋದಿ ಸಂವಾದದ ವೇಳೆ ತಿಳಿಸಿದರು. ಇನ್ನು ಗಂಧದ ನಾಡು ಎಂದೇ ಹೆಸರು ಗಳಿಸಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡುತ್ತಿರುವುದರಿಂದ, ಗಂಧದ ಮಾರುಕಟ್ಟೆ ಆಸ್ಟ್ರೇಲಿಯಾದಲ್ಲಿ ದೊಡ್ಡದಾಗಿದೆ. ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಮತ್ತೆ ಗಂಧದ ಮರ ಬೆಳೆಯಲು ಅನುಕೂಲ ಮಾಡಿಕೊಡುವುದಾಗಿ ಮೋದಿ ಹೇಳಿದರು.

ಅಷ್ಟೇ ಅಲ್ಲದೆ ಬೆಂಗಳೂರಿನತ್ತ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ. ಮತದಾರರ ವಿಶ್ವಾಸ ಗಳಿಸಿದರೆ ಅಧಿಕಾರ ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಬಿಜೆಪಿ ಅಭಿವೃದ್ಧಿ ರಾಜಕೀಯಕ್ಕೆ ಮಹತ್ವ ನೀಡಿದ್ದು, ಜಾತಿ, ಧರ್ಮ, ಸಮುದಾಯ ವಿಭಜನೆ ಬಿಜೆಪಿ ಗುರಿಯಲ್ಲ. ಅಭಿವೃದ್ಧಿ ಅಂಜೆಡಾ ಮೇಲೆಯೇ ನಾವು ಚುನಾವಣೆ ಸ್ಪರ್ಧಿಸಬೇಕು. ಕಳೆದ ಕೆಲವು ಚುನಾವಣೆಗಳನ್ನು ಅವಲೋಕಿಸಿದರೆ ಕೆಲ ರಾಜಕೀಯ ಪಕ್ಷಗಳು ಜಾತಿ, ಧರ್ಮ, ಸಮುದಾಯದ ಮೂಲಕ ರಾಜಕೀಯ ಮಾಡುತ್ತಿವೆ ಎಂಬುದನ್ನು ತಿಳಿಯಬಹುದು. ಇವುಗಳ ಆಧಾರದ ಮೇಲೆಯೇ ಅವರು ಚುನಾವಣಾ ರಣತಂತ್ರ ರೂಪಿಸುತ್ತಿವೆ ಎಂದು ಹೇಳಿದರು.

ಇದೇ ವೇಳೆ ಕೇಂದ್ರ ಸರ್ಕಾರ ಕರ್ನಾಟಕಕ್ಕಾಗಿ ಸುಮಾರು 14 ಸಾವಿರ ಕೋಟಿ ಮೌಲ್ಯ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಕರ್ನಾಟಕದಲ್ಲಿ ಸಾಕಷ್ಚು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕಾಂಗ್ರೆಸ್ ಸರ್ಕಾರದ ನಾಲ್ಕು ವರ್ಷಗಳ ಅವಧಿಯಲ್ಲಿ ಆ ಸರ್ಕಾರ ಮೂಲಸೌಕರ್ಯಾಭಿವೃದ್ಧಿಯಲ್ಲಿ ಕೇವಲ 400 ಕೋಟಿ ರು. ಹಣವನ್ನು ವ್ಯಯಿಸಿತ್ತು. ಆದರೆ ಬಿಜೆಪಿ ಸರ್ಕಾರ ಇದೇ 4 ವರ್ಷಗಳ ಅವಧಿಯಲ್ಲಿ 1600 ಕೋಟಿ ಹಣ ವ್ಯಯಿಸಿದೆ. ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿದ್ದರೆ, ಇದೇ ಅವಧಿಯಲ್ಲಿ ಬಿಜೆಪಿ ಸರ್ಕಾರ 7800 ಮೆಗಾ ವ್ಯಾಟ್ ವಿದ್ಯುತ್ ಉತ್ಬಾದನೆ ಮಾಡಿದೆ. ಉಜ್ವಲ ಯೋಜನೆ ಅಡಿಯಲ್ಲಿ 9 ಲಕ್ಷ ಉಚಿತ ಎಲ್ ಪಿಜಿ ಸಂಪರ್ಕ ಕಲ್ಪಿಸಿದೆ. ಯುಪಿಎ ಅವಧಿಯಲ್ಲಿ 20 ಲಕ್ಷ ಶೌಚಾಲಯ ನಿರ್ಮಾಣವಾಗಿತ್ತು, ಆದರೆ ಎನ್ ಡಿಎ ಸರ್ಕಾರದ ಅವಧಿಯಲ್ಲಿ 2100 ಕೋಟಿ ವೆಚ್ಚದಲ್ಲಿ 34 ಲಕ್ಷ ಶೌಚಾಲಯ ನಿರ್ಮಾಣವಾಗಿದೆ ಎಂದು ಮೋದಿ ಹೇಳಿದರು.

ಬಳಿಕ ಪ್ರಧಾನಿ ಮೋದಿ, ಕಾರ್ಕಳ ಶಾಸಕ ಸುನೀಲ್​ ಕುಮಾರ್​, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಧಾರವಾಡದಲ್ಲಿ ಶಾಸಕ‌ ಅರವಿಂದ ಬೆಲ್ಲದ, ಶಾಸಕ ಸಿ‌.ಟಿ.ರವಿ, ರಾಜಾಜಿನಗರ ಶಾಸಕ ಸುರೇಶ್​ ಕುಮಾರ್​ ಅವರೊಂದಿಗೆ ಸಂವಾದ ನಡೆಸಿದರು. ಅಲ್ಲದೆ ಚುನಾವಣಾ ಸಂಬಂಧ ಕೆಲ ಸಲಹೆಗಳನ್ನು ನೀಡಿದರು.

Comments are closed.