ರಾಷ್ಟ್ರೀಯ

ಮದುವೆ ಮನೆಯಲ್ಲಿ ವರನನ್ನೇ ಅರೆಸ್ಟ್ ಮಾಡಿಸಿದ ವಧು!

Pinterest LinkedIn Tumblr

ಕೋಲ್ಕತ್ತಾ: ಮದುವೆ ಮನೆಯಲ್ಲಿ ವರನೊಬ್ಬ ಕುಡಿದು ಬಂದು ಅಸಭ್ಯವಾಗಿ ವರ್ತಿಸಿದ್ದಕ್ಕೆ ವಧು ಮದುವೆ ನಿಲ್ಲಿಸಿ ಆತನನ್ನು ಅರೆಸ್ಟ್ ಮಾಡಿಸಿದ ಘಟನೆ ಪಶ್ಚಿಮ ಬಂಗಾಳದ ಬಂಹುರಾ ಜಿಲ್ಲೆಯಲ್ಲಿ ನಡೆದಿದೆ.

ಬುದ್ಹಾರ್ ಸಹೀಶ್ ಶಾಲೆಯಲ್ಲಿ ಶಿಕ್ಷಕನಾಗಿದ್ದು ಆತನ ಮದುವೆ ಏಪ್ರಿಲ್ 20ರಂದು ನಿಗದಿಯಾಗಿತ್ತು. ತನ್ನ ಮದುವೆಯ ದಿನವೇ ಸಹೀಶ್ ತನ್ನ ಸಂಬಂಧಿಕರ ಜೊತೆ ಕುಡಿದು ಮದುವೆ ಮನೆಗೆ ಬಂದಿದ್ದನು. ಭಯಂಕರ ನಶೆಯಲ್ಲಿದ ಸಹೀಶ್ ಸರಿಯಾಗಿ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ.

ಸಹೀಶ್ ನನ್ನು ಈ ರೀತಿ ನೋಡಿದ ಆತನ ಪೋಷಕರು ದಂಗಾಗಿದ್ದಾರೆ. ಅಷ್ಟೇ ಅಲ್ಲದೇ ಮದುವೆ ಮಂಟಪದಲ್ಲಿ ವರ ಹಾಗೂ ವಧು ಕುಳಿತುಕೊಳ್ಳಲು ಇಟ್ಟಿದ್ದ ಸ್ಟೂಲ್‍ನನ್ನು ಕಾಲಿನಿಂದ ಒದ್ದಿದ್ದಾನೆ. ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪುರೋಹಿತರನ್ನು ಕೆಟ್ಟ ಪದಗಳಲ್ಲಿ ನಿಂದಿಸಿ ಜೋರಾಗಿ ಕಿರುಚಾಡಿದ್ದಾನೆ ಎಂದು ವರದಿಯಾಗಿದೆ.

ಈ ಶಾಸ್ತ್ರ-ಸಂಪ್ರದಾಯಗಳಲ್ಲಿ ನನಗೆ ನಂಬಿಕೆಯಿಲ್ಲ. ನನ್ನ ವಧುವನ್ನು ನನ್ನ ಜೊತೆ ಕರೆದುಕೊಂಡು ಹೋಗಲು ಬಿಡು ಎಂದು ಕಿರುಚಾಡಿದ್ದಾನೆ. ಈ ವರ್ತನೆ ಕಂಡು ಶಾಕ್ ಆದ ವಧು ಸಹೀಶ್ ಜೊತೆಗಿನ ತನ್ನ ಮದುವೆಯನ್ನು ಮುರಿದಿದ್ದಾಳೆ. ನಂತರ ವಧುವಿನ ತಂದೆ ಪೊಲೀಸರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವರ ಹಾಗೂ ಆತನ ಸಹೋದರನನ್ನು ವಶಕ್ಕೆ ಪಡೆದರು. ಕುಡಿದ ನಶೆಯಲ್ಲಿದ್ದ ಇಬ್ಬರೂ ದೂರು ದಾಖಲಾಗುವರೆಗೂ ಪೊಲೀಸರ ವಶದಲ್ಲೇ ಇದ್ದರು ಎಂದು ವರದಿಯಾಗಿದೆ.

ಮದುವೆಗೆ ಬಂದಿದ್ದ ಅತಿಥಿಗಳು ವಧುವಿನ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಹೀಶ್‍ನ ಕುಟುಂಬದವರು ವರದಕ್ಷಿಣೆ ಆಗಿ ಪಡೆದ ಬೈಕ್, ಹಾಸಿಗೆ, ಡ್ರೆಸಿಂಗ್ ಟೇಬಲ್, ತಿಜೋರಿ ಹಾಗೂ ಉಳಿದ ವಸ್ತುಗಳನ್ನು ವಧುವಿನ ಕುಟುಂಬಕ್ಕೆ ಹಿಂತಿರುಗಿಸಿದ್ದರು.

Comments are closed.