ರಾಷ್ಟ್ರೀಯ

‘108’ ಆ್ಯಂಬುಲೆನ್ಸ್ ಸೇವೆ ಕೇಳಿರುತ್ತೀರ, ‘155377’ ಇದ್ಯಾವ ಸೇವೆ?

Pinterest LinkedIn Tumblr


ಚೆನ್ನೈ: ಸಾಮಾನ್ಯವಾಗಿ ತುರ್ತು ಸಂದರ್ಭಗಳಲ್ಲಿ ಎಲ್ಲರಿಗೂ ನೆನಪಾಗುವುದು 108 ಆ್ಯಂಬುಲೆನ್ಸ್ ಸೇವೆ. ಆದರೆ ಯಾರಾದರೂ ಮೃತಪಟ್ಟಾಗ ಶವ ಸಾಗಿಸಲು ಅನುಕೂಲವಾಗಲಿ ಎಂದು ತಮಿಳುನಾಡು ಸರಕಾರ ‘155377’ ಉಚಿತ ಶವವಾಹನ ಸೇವೆಯನ್ನು ಪರಿಚಯಿಸಿದೆ. ವಿಶೇಷ ಎಂದರೆ ಆ ರೀತಿಯ ಉಚಿತ ಸೇವೆ ಇದೆ ಎಂಬುದು ಅಲ್ಲಿನ ಬಹುತೇಕ ಮಂದಿಗೆ ಗೊತ್ತೇ ಇಲ್ಲ.

2011ರಲ್ಲೇ ತಮಿಳುನಾಡು ಸರಕಾರ ಈ ಉಚಿತ ಶವವಾಹನ ಸೇವೆಯನ್ನು ಪರಿಚಯಿಸಿದೆ. ತಮಿಳುನಾಡಿನಾದ್ಯಂತ ಒಟ್ಟು 160 ಶವವಾಹನಗಳಿವೆ. ಚೆನ್ನೈನಲ್ಲೇ 20 ಶವವಾಹನಗಳಿವೆ. ಈ ಸೇವೆ ಬೇಕು ಎನ್ನುವವರು ‘155377’ ಸಂಖ್ಯೆಗೆ ಕರೆ ಮಾಡಿ ಮೃತದೇಹ ಎಲ್ಲಿದೆ ಎಂಬ ವಿವರಗಳನ್ನು ನೀಡಿದರೆ ಸಾಕು. ಶವವಾಹನ ಕಳುಹಿಸಿಕೊಡುತ್ತಾರೆ.

ಈ ಸೇವೆ ವಿದೇಶಿಯರಿಗೆ ಹಾಗೂ ಹೊರರಾಜ್ಯದವರಿಗೆ ಉಚಿತವಾಗಿ ಕಲ್ಪಿಸಲಾಗಿದೆ. ಒಂದು ವೇಳೆ ಶವವನ್ನು ತುಂಬ ದೂರ ಸಾಗಿಸಬೇಕಾದರೆ ರೈಲಿನಲ್ಲಿ ಕಳುಹಿಸುವ ವ್ಯವಸ್ಥೆಯೂ ಇದೆ. ಶವದ ಜತೆಗೆ ಇನ್ನೊಬ್ಬರಿಗೂ ಉಚಿತವಾಗಿ ಟಿಕೆಟ್ ನೀಡಿ ಕಳುಹಿಸಿಕೊಡಲಾಗುತ್ತದೆ. ವಿದೇಶದಿಂದ ಬರುವ ದೇಹಗಳನ್ನೂ ಏರ್‌ಪೋರ್ಟ್‌ನಿಂದ ಅವರ ಮನೆತನಕ ಶವವಾಹನದಲ್ಲಿ ತಲುಪಿಸುತ್ತಾರೆ. ಈ ಎಲ್ಲಾ ಸೇವೆಗಳಿಗೆ ಯಾವುದೇ ಶುಲ್ಕ ಇಲ್ಲ. ಸಂಪೂರ್ಣ ಉಚಿತ.

ಆದರೆ ಈ ರೀತಿಯ ಒಂದು ಸೇವೆ ಇದೆ ಎಂಬುದು ತಮಿಳುನಾಡಿನ ಬಹುತೇಕರಿಗೆ ಗೊತ್ತೇ ಇಲ್ಲ. ಸರಕಾರಗಳೂ ಈ ಬಗ್ಗೆ ಹೆಚ್ಚು ಪ್ರಚಾರ ನೀಡದೆ ಇರುವುದೂ ಇದಕ್ಕೆ ಕಾರಣವಾಗಿರಬಹುದು. ಆದರೆ ಇದು ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದೆ. ಖಾಸಗಿ ಆಸ್ಪತ್ರೆಗಳಿಗೂ ಈ ಸೇವೆ ವಿಸ್ತರಿಸಿದರೆ ಅನುಕೂಲವಾಗುತ್ತದೆ ಎಂಬುದು ಹಲವರ ಅಭಿಪ್ರಾಯ. ಇನ್ನೂ ಕೆಲವರಿಗೆ ಈ ಸೇವೆ ಉಚಿತ ಎಂದು ಗೊತ್ತಿಲ್ಲದೆ, ಶವವಾಹನ ಚಾಲಕರು ಇಂತಿಷ್ಟು ದುಡ್ಡು ಕೀಳುತ್ತಿರುವುದರಿಂದ ಈ ‘155377’ ಸೇವೆಗೆ ಅರ್ಥವಿಲ್ಲದಂತಾಗಿದೆ.

Comments are closed.