ರಾಷ್ಟ್ರೀಯ

24 ಗಂಟೆ ಕಾರ್ಯನಿರ್ವಹಿಸುತ್ತಿರುವ ಮುದ್ರಣಾಲಯಗಳು; ರೂ.500, 200 ಮುಖಬೆಲೆಯ ನೋಟುಗಳ ಮುದ್ರಣ

Pinterest LinkedIn Tumblr

ನವದೆಹಲಿ: ಎಟಿಎಂಗಳಲ್ಲಿ ನಗದು ಕೊರತೆಯಿಂದಾಗಿ ದೇಶದ 10ಕ್ಕೂ ಹೆಚ್ಚು ರಾಜ್ಯಗಳು ತತ್ತರಿಸಿ ಹೋಗಿದ್ದು, ಇದೀಗ ನಗದು ಕೊರತೆ ನೀಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ನೋಟು ಮುದ್ರಿಸುವ ನಾಲ್ಕು ಮುದ್ರಣಾಲಯಗಳು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 70 ಸಾವಿರ ಕೋಟಿ ರುಪಾಯಿ ಕೊರತೆ ನೀಗಿಸಲು ಕಳೆದ ವಾರದಿಂದ ಮುದ್ರಣಾಯಗಳು ಯಾವುದೇ ಬಿಡುವಿಲ್ಲದೆ 500 ಮತ್ತು 200 ರುಪಾಯಿ ನೋಟುಗಳನ್ನು ಮುದ್ರಿಸುತ್ತಿವೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಸೆಕ್ಯೂರಿಟಿ ಪ್ರಿಂಟಿಂಗ್ ಆಂಡ್ ಮಿಂಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ನ ನಾಲ್ಕು ಮುದ್ರಣಾಲಯಗಳು ನಿತ್ಯ 18ರಿಂದ 19 ಗಂಟೆ ಕಾರ್ಯನಿರ್ವಹಿಸುತ್ತಿವೆ. ಕೇವಲ ಮೂರರಿಂದ ನಾಲ್ಕು ಗಂಟೆ ಮಾತ್ರ ಬಿಡುವು ತೆಗೆದುಕೊಳ್ಳಲಾಗುತ್ತಿದೆ. ಆದರೆ ನಗದು ಬೇಡಿಕೆ ಅತಿ ಹೆಚ್ಚಾಗಿರುವುದರಿಂದ ಎಟಿಎಂಗಳಲ್ಲಿ ಹಣ ಸಿಗದೆ ಜನ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.

ಸಾಮಾನ್ಯವಾಗಿ ತಿಂಗಳಲ್ಲೇ 15 ದಿನ ಮಾತ್ರ ನೋಟುಗಳನ್ನು ಮುದ್ರಣ ಮಾಡಲಾಗುತ್ತದೆ. ಆದರೆ ಈಗ 24×7 ಕಾರ್ಯನಿರ್ವಹಿಸುತ್ತಿರುವುದರಿಂದ ಈ ತಿಂಗಳ ಅಂತ್ಯಕ್ಕೆ ನಗದು ಕೊರತೆ ನೀಗುವ ಸಾಧ್ಯತೆ ಇದೆ.

ಹಳೆ 500 ಹಾಗೂ 1000 ರುಪಾಯಿ ನೋಟ್ ಗಳನ್ನು ನಿಷೇಧಿಸಿದ ನಂತರ 2000 ರುಪಾಯಿ ನೋಟು ಮುದ್ರಿಸುವ ಸಂದರ್ಭದಲ್ಲಿ ಮಾತ್ರ 24×7 ಕೆಲಸ ಮಾಡಲಾಗಿತ್ತು. ಈಗ ಮುದ್ರಣಾಲಯ ಮತ್ತೆ 24×7 ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

Comments are closed.