ರಾಷ್ಟ್ರೀಯ

ಪತ್ರಕರ್ತೆಯ ಕೆನ್ನೆ ಮುಟ್ಟುವ ಮೂಲಕ ವಿವಾದಕ್ಕೊಳಗಾದ ತಮಿಳುನಾಡು ರಾಜ್ಯಪಾಲ

Pinterest LinkedIn Tumblr

ಚೆನ್ನೈ: ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ರಾಜಭವನದಲ್ಲಿ ಮಂಗಳವಾರ ಸಂಜೆ ನಡೆದ ಮಾಧ್ಯಮ ಸಂವಾದದಲ್ಲಿ ಓರ್ವ ಮಹಿಳಾ ಪತ್ರಕರ್ತೆಯ ಕೆನ್ನೆ ಮುಟ್ಟುವ ಮೂಲಕ ವಿವಾದಕ್ಕೀಡಾಗಿದ್ದಾರೆ.

ಉನ್ನತಾಧಿಕಾರಿಗಳ ಲೈಂಗಿಕ ಬಯಕೆ ತೀರಿಸಬೇಕೆಂದು ವಿದ್ಯಾರ್ಥಿನಿಯರ ಮೇಲೆ ಒತ್ತಡ ತಂದಿದ್ದಾರೆ ಎಂಬ ಆರೋಪಗಳನ್ನು ಎದುರಿಸುತ್ತಿರುವ ಮಧುರೈ ಕಾಮರಾಜ್ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕಿ ನಿರ್ಮಲಾ ದೇವಿ ಜತೆಗೆ ಸಂಬಂಧ ಇದೆ ಎಂಬ ಆರೋಪಕ್ಕೆ ಗುರಿಯಾಗಿರುವ ಅವರು ಮತ್ತೊಮ್ಮೆ ಈಗ ವಿವಾದಕ್ಕೆ ಸಿಲುಕಿದ್ದಾರೆ.

ಮಂಗಳವಾರ ಸಂಜೆ ರಾಜಭನವದಲ್ಲಿ ಮಾಧ್ಯಮ ಸಂವಾದಲ್ಲಿ 78 ವರ್ಷಗಳ ಬನ್ವಾರಿಯಾ ಲಾಲ್ ತನಗೆ ನಿರ್ಮಲಾ ದೇವಿ ಯಾರು ಎಂದು ಗೊತ್ತಿಲ್ಲ ಎಂದರು. ಸಂವಾದ ಮುಗಿದು ವೇದಿಕೆಯಿಂದ ಇಳಿದು ಹೋಗುತ್ತಿದ್ದಾಗ ಆಂಗ್ಲ ನಿಯತಕಾಲಿಕೆಯ ಮಹಿಳಾ ಪತ್ರಕರ್ತೆಯೊಬ್ಬರು ಪ್ರಶ್ನೆ ಕೇಳಿದಾಗ ಉತ್ತರ ನೀಡದೆ ಆಕೆಯ ಕೆನ್ನೆ ತಾಕಿದರು. ಇದನ್ನು ನೋಡಿ ಅಲ್ಲಿದ್ದವರೆಲ್ಲಾ ಒಮ್ಮೆಲೆ ಚಕಿತರಾದರು.

ಈ ಬಗ್ಗೆ ಟ್ವೀಟ್ ಮಾಡಿರುವ ಮಹಿಳಾ ಪತ್ರಕರ್ತೆ, ‘ಸಂವಾದ ಮುಗಿದ ಬಳಿಕ ಅವರು ಹೋಗುತ್ತಿದ್ದ ಸಮಯದಲ್ಲಿ ನಾನು ರಾಜ್ಯಪಾಲರನ್ನು ಒಂದು ಪ್ರಶ್ನೆ ಕೇಳಿದೆ. ಅದಕ್ಕೆ ಅವರು ಉತ್ತರಿಸದೆ ನನ್ನ ಅನುಮತಿ ಇಲ್ಲದೆ ಕೆನ್ನೆ ತಾಕಿದರು. ಇದೊಂದು ಅನೈತಿಕ ವರ್ತನೆ. ಅನುಮತಿ ಇಲ್ಲದೆ ಬೇರೆಯವರನ್ನು ಸ್ಪರ್ಶಿಸುವುದು ಸರಿಯಲ್ಲ. ಅದರಲ್ಲೂ ಓರ್ವ ಮಹಿಳೆಯನ್ನು ತಾಕಿದ್ದು ಸರಿಯಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

‘ಈ ಘಟನೆ ಬಳಿಕ ತನ್ನ ಮುಖವನ್ನು ಹಲವಾರು ಸಲ ತೊಳೆದುಕೊಂಡೆ. ಆದರೂ ಇನ್ನೂ ಅದರಿಂದ ಹೊರಬರಲಾಗುತ್ತಿಲ್ಲ ಎಂದು ಅವರು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ರಾಜ್ಯಪಾಲ ಪುರೋಹಿತ್ ಬಗ್ಗೆ ಕುಪಿತಗೊಂಡಿದ್ದೇನೆ. ಅವರು ಸ್ಪರ್ಶಿಸಿದ್ದು ಮೆಚ್ಚುಗೆ ವ್ಯಕ್ತಪಡಿಸಲು ಇರಬಹುದು, ಒಬ್ಬ ಅಜ್ಜನಂತೆ ಇರಬಹುದು, ಏನಾದರೂ ಆಗಿರಬಹುದು. ಆದರೆ ನನ್ನ ಉದ್ದೇಶದ ಪ್ರಕಾರ ಆ ರೀತಿ ಮಾಡಿದ್ದು ತಪ್ಪು’ ಎಂದಿದ್ದಾರೆ.

ರಾಜ್ಯಪಾಲರ ಪುರೋಹಿತ್‌ ಈ ರೀತಿ ನಡೆದುಕೊಂಡಿರುವ ಬಗ್ಗೆ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿದೆ. ಸಂವಿಧಾನಬದ್ಧವಾದ ಪದವಿಯಲ್ಲಿದ್ದು ಈ ರೀತಿ ಮಾಡಿದ್ದು ಸರಿಯಲ್ಲ ಎಂದು ಡಿಎಂಕೆ ಸಂಸದ ಕನಿಮೌಳಿ ಹೇಳಿದ್ದಾರೆ. ಅವರ ಉದ್ದೇಶ ಏನಾದರೂ ಆಗಿರಬಹುದು ಆದರೆ, ಮಹಿಳೆಯೊಬ್ಬರ ಗೌರವಕ್ಕೆ ಹಾನಿಯಾಗುವಂತಿದೆ ಎಂದಿದ್ದಾರೆ. ಡಿಎಂಕೆ ಕಾರ್ಯನಿರ್ವಾಹಕ ಅಧ್ಯಕ್ಷ ಎಂ ಕೆ ಸ್ಟ್ಯಾಲಿನ್ ಸಹ ಗರ್ವನರ್ ವರ್ತನೆಯನ್ನು ಟ್ವಿಟ್ಟರ್‌ನಲ್ಲಿ ಖಂಡಿಸಿದ್ದಾರೆ.

Comments are closed.