ರಾಷ್ಟ್ರೀಯ

ಹೈದರಾಬಾದ್ ಮಕ್ಕಾ ಮಸೀದಿ ಸ್ಫೋಟ ಪ್ರಕರಣ: ಐವರು ಆರೋಪಿಗಳ ಖುಲಾಸೆ

Pinterest LinkedIn Tumblr

ಹೈದರಾಬಾದ್‌: ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಐದು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಹೈದರಾಬಾದ್‌ನ ವಿಶೇಷ ನ್ಯಾಯಾಲಯ ಸೊಮವಾರ ಖುಲಾಸೆಗೊಳಿಸಿದೆ.

ಪುರಾವೆಗಳ ಕೊರತೆಯನ್ನು ಉದಾಹರಿಸಿ, ತನಿಖಾ ಸಂಸ್ಥೆ ಪೂರಕ ದಾಖಲೆಗಳನ್ನು ಒದಗಿಸಿ ತಪ್ಪನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ನ್ಯಾಯಾಲಯ ಹೇಳಿದೆ.

ಪ್ರಕರಣದಲ್ಲಿ ಬಲಪಂಥೀಯ ಸಂಘಟನೆಗಳಿಗೆ ಸೇರಿದ್ದ ಹತ್ತು ಮಂದಿ ವಿರುದ್ಧ ಆಪಾದನೆ ಹೊರಿಸಲಾಗಿತ್ತು. ಆದಾಗ್ಯೂ ಇಂದು ಐದು ಮಂದಿ ಮಾತ್ರ ವಿಚಾರಣೆಗೆ ಒಳಗಾಗಿದ್ದಾರೆ.

ದೇವೇಂದ್ರ ಗುಪ್ತಾ, ಲೋಕೇಶ್ ಶರ್ಮಾ, ಸ್ವಾಮಿ ಅಸೀಮಾನಂದ ಅಲಿಯಾಸ್ ನಬಾ ಕುಮಾರ್ ಸರ್ಕಾರ್, ಭಾರತ್ ಮೋಹನ್‌ಲಾಲ್‌ ರಾತೇಶ್ವರ್ ಅಲಿಯಾಸ್ ಭರತ್ ಭಾಯಿ ಮತ್ತು ರಾಜೇಂದ್ರ ಚೌಧರಿ ಖುಲಾಸೆಗೊಂಡವರು.

ಸ್ವಾಮಿ ಅಸೀಮಾನಂದ ಸೇರಿದಂತೆ ಎಲ್ಲಾ ಹತ್ತು ಆರೋಪಿಗಳು ‘ಅಭಿನವ ಭಾರತ’ ಸಂಘಟನೆಯ ಸದಸ್ಯರು. ದೇವೇಂದ್ರ ಗುಪ್ತಾ, ಲೋಕೇಶ್‌ ಶರ್ಮಾ ಅಲಿಯಾಸ್‌ ಅಜಯ್‌ ತಿವಾರಿ, ಲಕ್ಷ್ಮಣ್‌ ದಾಸ್‌ ಮಹಾರಾಜ್‌, ಮೋಹನ್‌ಲಾಲ್‌ ರಾತೇಶ್ವರ ಮತ್ತು ರಾಜೇಂದ್ರ ಚೌಧರಿ ಪ್ರಕರಣದ ಪ್ರಮುಖ ಆರೋಪಿಗಳು.

ಇವರಲ್ಲಿ ಇಬ್ಬರು ಆಪಾದಿತರಾದ ಸ್ವಾಮಿ ಅಸೀಮಾನಂದ ಹಾಗೂ ಮೋಹನ್‌ಲಾಲ್‌ ರಾತೇಶ್ವರ್‌ ಜಾಮೀನು ಪಡೆದು ಹೊರಗಿದ್ದಾರೆ. ಮಿಕ್ಕ ಮೂವರು ನ್ಯಾಂಯಾಂಗ ಬಂಧನದಲ್ಲಿದ್ದು, ಹೈದರಾಬಾದ್‌ನ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇಬ್ಬರು ಆರೋಪಿಗಳಾದ ರಾಮಚಂದ್ರ ಕಲ್ಸಾಂಗ್ರ ಮತ್ತು ಸಂದೀಪ್‌ ಡಾಂಗೆ ಈ ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಆರ್‌ಎಸ್‌ಎಸ್‌ನ ಕಾರ್ಯಕಾರಿ ಸುನೀಲ್‌ ಜೋಶಿ ತನಿಖೆ ವೇಳೆ ಗುಂಡೇಟಿಗೆ ಬಲಿಯಾಗಿದ್ದಾರೆ.

ಪ್ರಕರಣವನ್ನು 2011 ಸಿಬಿಐನಿಂದ ಎನ್‌ಐಎ ಪಡೆದುಕೊಂಡಿತ್ತು. ತನಿಖೆ ವೇಳೆ 226 ಸಾಕ್ಷಿಗಳ ವಿಚಾರಣೆ ನಡೆಸಿ 411 ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ.

11 ವರ್ಷಗಳ ಹಿಂದೆ 2007 ಮೇ 18ರಂದು ಹೈದರಾಬಾದ್‌ನ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿನ ನಡೆದ ಪೈಪ್‌ ಬಾಂಬ್‌ ಸ್ಫೋಟದಲ್ಲಿ ಎಂಟು ಜನ ಮೃತಪಟ್ಟು, 58 ಜನ ಗಾಯಗೊಂಡಿದ್ದರು. ಬಲಪಂಥೀಯ ಸಂಸ್ಥೆಗಳಿಗೆ ಸೇರಿದ ಹತ್ತು ಜನರನ್ನು ಪ್ರಕರಣಲ್ಲಿ ಆರೋಪಿಗಳು ಎಂದು ಹೆಸರಿಸಲಾಗಿತ್ತು. ಇಬ್ಬರು ಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿದೆ.

Comments are closed.