ರಾಷ್ಟ್ರೀಯ

53 ವರ್ಷಗಳಲ್ಲಿ 1 ಬಾರಿಯೂ ಸೋಲದ ರಾಜಕಾರಣಿ!: ಸಮಿರ್‌ ಮಂಡಲ್‌, ದಾಸ್‌ಪುರ್‌, ಈ ಸಮಯ್‌

Pinterest LinkedIn Tumblr

ಕೋಲ್ಕತ: 83 ವರ್ಷ ಹರೆಯದ ರಾಜಕಾರಿಣಿ ತನ್ನ 53 ವರ್ಷಗಳ ರಾಜಕೀಯ ಜೀವನದಲ್ಲಿ ಒಂದು ಬಾರಿಯೂ ಸೋಲನ್ನು ಕಂಡಿಲ್ಲ. ಗ್ರಾಮ ಪಂಚಾಯಿತಿಯಿಂದ ಪಂಚಾಯತ್‌ ಸಮಿತಿವರೆಗೆ ಸ್ಪರ್ಧಿಸಿರುವ ಈ ಅಪರೂಪದ ರಾಜಕಾರಣಿಗೆ ಸೋಲೆಂದರೆ ಏನೆಂದೇ ಅರಿವಿಲ್ಲ.

ಪಶ್ಚಿಮ ಬಂಗಾಳದ ದಾಸ್‌ಪುರದ ಗೋಪಾಲ ಚಂದ್ರ ನಂದಿ ಎಂಬುವವರೇ ಈ ಅಪರೂಪದ ರಾಜಕಾರಣಿ. 1965ರಲ್ಲಿ ತನ್ನ ರಾಜಕೀಯ ಕರಿಯರ್‌ ಆರಂಭಿಸಿರುವ ಗೋಪಾಲ ಚಂದ್ರ ಈ ಬಾರಿ ನಂದಾಪುರದ ಗೋವಿಂದ ನಗರ ಗ್ರಾಮ ಪಂಚಾಯಿತಿಯಿಂದ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಚುನಾವಣೆಯಲ್ಲೂ ಗೆಲುವು ತಮ್ಮದೆ ಎಂದು ನಗು ಬೀರುತ್ತಾರೆ ಗೋಪಾಲ ಚಂದ್ರ.

ಕಾಂಗ್ರೆಸ್‌ ಮೂಲಕ ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿದ ಗೋಪಾಲ ಚಂದ್ರ ಅವರು ಕೊನೆಗೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಸೇರಿಕೊಂಡರು. ಅಚ್ಚರಿಯ ವಿಷಯವೆಂದರೆ 34 ವರ್ಷಗಳ ಎಡ ಪಕ್ಷಗಳ ಹಿಡಿತವಿದ್ದ ಸಂದರ್ಭದಲ್ಲು ಗೋಪಾಲ ಚಂದ್ರ ಅವರ ಹತ್ತಿರ ಸೋಲು ಸುಳಿಯಲಿಲ್ಲ. ಕೇಂದ್ರ ಸರಕಾರದಿಂದ 25 ವರ್ಷಗಳ ವರೆಗೆ ಪಂಚಾಯಿತಿ ಸದಸ್ಯರಾಗಿರುವ ಕೇಂದ್ರ ಸರಕಾರದ ಪ್ರಮಾಣ ಪತ್ರವನ್ನು ಪಡೆದಿದ್ದಾರೆ.

ಗೋಪಾಲ ಚಂದ್ರ ಅವರು ತಂದೆ ಹರಿಪಾದ ನಂದಿ ಅವರ ಜತೆ ಮಹಾತ್ಮ ಗಾಂಧಿ ಅವರ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿದ್ದಾರೆ. ಕೊನೆಗೆ ಬಿಧನ್‌ ಚಂದ್ರ ರಾಯ್‌ ಮತ್ತು ಅಜಯ್‌ ಮುಖರ್ಜಿ ಅವರಿಂದ ಸ್ಪೂರ್ತಿ ಪಡೆದು ರಾಜಕೀಯ ಜೀವನಕ್ಕೆ ಕಾಲಿಟ್ಟರು.

‘ಗೋಪಾಲ ಚಂದ್ರ ನಂಬಿಕಸ್ಥ ಮನುಷ್ಯ. ಆದರೆ ಜನರಿಗೆ ಏನೂ ಮಾಡಿಲ್ಲ’ ಎನ್ನುತ್ತಾರೆ ಪಂಚಾಯತ್‌ ಚುನಾವಣೆಯಲ್ಲಿ ಗೋಪಾಲ ಚಂದ್ರ ವಿರುದ್ಧ ಸ್ಪರ್ಧಿಸುತ್ತಿರುವ ಸಿಪಿಎಂನ ಪ್ರದೀಪ್‌ ಪಾಯಿನ್‌.

ಯಾವತ್ತು ಜನರಿಗಾಗಿ ಕೆಲಸ ಮಾಡುತ್ತೇನೆ. ಜನತೆಗೆ ನನ್ನ ಮೇಲೆ ಅಭಿಮಾನವಿದೆ. ಈ ಬಾರಿ ಗೆಲ್ಲುತ್ತೇನೆ ಎಂಬ ನಂಬಿಕೆ ಇದೆ. ನನಗೆ ಯಾರು ಶತ್ರುಗಳಿಲ್ಲ ಎಂದು ಹಿರಿಯ ರಾಜಕಾರಣಿ ಮಾತು ಮುಗಿಸುತ್ತಾರೆ.

Comments are closed.