ರಾಷ್ಟ್ರೀಯ

ಅತ್ಯಾಚಾರವೆಸಗಿ ಜೈಲಲ್ಲಿದ್ದ ವ್ಯಕ್ತಿಯನ್ನು ನೋಡಿ ನೊಂದ ‘ಸಂತ್ರಸ್ತೆ’ ಮಾಡಿದ್ದೇನು..?

Pinterest LinkedIn Tumblr

 

ಪಣಜಿ: ಅತ್ಯಾಚಾರದ ಆರೋಪ ಹೊರಿಸಿ ಯುವಕನನ್ನು ಜೈಲಿನಲ್ಲಿ ಇರುವಂತೆ ಮಾಡಿದ್ದ ಮಹಿಳೆಯೊಬ್ಬರು, ಆ ಯುವಕನನ್ನು ಜೈಲಿನಲ್ಲಿ ನೋಡಲಾಗದೇ ಕೇಸನ್ನು ವಾಪಸ್‌ ಪಡೆದಿರುವ ಅಪರೂಪದ ಘಟನೆ ಇಲ್ಲಿ ನಡೆದಿದೆ.

‘ಇದೊಂದು ಆಳವಾದ ಪ್ರೇಮ ಕಥನ’ ಎಂದ ಹೈಕೋರ್ಟ್‌, ಯುವಕನಿಗೆ ಸೆಷನ್ಸ್‌ ಕೋರ್ಟ್‌ ವಿಧಿಸಿದ್ದ 10 ವರ್ಷಗಳ ಶಿಕ್ಷೆಯನ್ನು ರದ್ದು ಮಾಡಿದೆ.

ಬಂಬೋಲಿಮ್‌ ನಿವಾಸಿ ಯೋಗೇಶ್‌ ಪಾಲ್ಕರ್‌ (27) ಹೋಟೆಲ್‌ ಒಂದರಲ್ಲಿ ಬಾಣಸಿಗನಾಗಿದ್ದ. ‘ಈತ ತನ್ನ ಮೇಲೆ 2013ರಿಂದಲೂ ಅತ್ಯಾಚಾರ ಎಸಗುತ್ತಿದ್ದಾನೆ’ ಎಂದು 2015ರಲ್ಲಿ ಮಹಿಳೆ(25) ದೂರು ದಾಖಲು ಮಾಡಿದ್ದರು. ‘ಮದುವೆಯಾಗುವುದಾಗಿ ನಂಬಿಸಿ ನನ್ನನ್ನು ದೈಹಿಕವಾಗಿ ಬಳಸಿಕೊಂಡ. ನಂತರ ನಾನು ಕೆಳಜಾತಿಗೆ ಸೇರಿದವಳಾಗಿರುವ ಕಾರಣ, ಮದುವೆಗೆ ಒಲ್ಲೆ ಎಂದ ಆತ ನನ್ನನ್ನು ನಿರಾಕರಿಸಲು ಶುರು ಮಾಡಿದ’ ಎಂದು ದೂರಿನಲ್ಲಿ ಆಕೆ ಉಲ್ಲೇಖಿಸಿದ್ದರು.

ಈ ದೂರಿನ ಅನ್ವಯ ಪೊಲೀಸರು ಯೋಗೇಶ್‌ ವಿರುದ್ಧ ಅತ್ಯಾಚಾರ ದೂರು ದಾಖಲು ಮಾಡಿದ್ದರು. ವಿಚಾರಣೆ ನಡೆಸಿದ್ದ ಸೆಷನ್ಸ್‌ ಕೋರ್ಟ್‌ 2015ರಲ್ಲಿ ಈತ ಅತ್ಯಾಚಾರ ಎಸಗಿರುವುದು ನಿಜ ಎಂದು ಹೇಳಿ 10 ವರ್ಷಗಳ ಶಿಕ್ಷೆ ಹಾಗೂ ₹ 10ಸಾವಿರ ದಂಡ ವಿಧಿಸಿತ್ತು.

ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್‌ ಮೊರೆ ಹೋಗಿದ್ದ. ಅದಾಗಲೇ ಮೂರು ವರ್ಷ ಜೈಲಿನಲ್ಲಿ ಆತ ಕಳೆದಿದ್ದ. ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸುವ ವೇಳೆ ಯುವತಿ ಪ್ರಮಾಣ ಪತ್ರವೊಂದನ್ನು ಸಲ್ಲಿಸಿದರು. ಅದರಲ್ಲಿ ಆಕೆ, ‘ಯೋಗೇಶ್‌ನನ್ನು ಜೈಲಿನ ಹಿಂದೆ ನೋಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಆತ ಈಗಾಗಲೇ ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಜೈಲಿನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದ್ದರಿಂದ ನಾನು ಭಾವುಕಳಾಗಿದ್ದೇನೆ. ಕೇಸನ್ನು ವಾಪಸ್‌ ಪಡೆಯುತ್ತಿದ್ದೇನೆ’ ಎಂದು ಉಲ್ಲೇಖಿಸಿದರು.

ಕೋರ್ಟ್‌ ಹೇಳಿದ್ದೇನು?
‘ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸಿದರೂ ಯುವತಿ ಆತನಿಂದ ದೂರ ಹೋಗದೇ ಸಂಬಂಧ ಮುಂದುವರಿಸಿದಳು. ಸಾಲದು ಎಂಬುದಕ್ಕೆ ಶಿಕ್ಷೆಯಾದ ಮೇಲೂ ಆತನ ಕಷ್ಟವನ್ನು ಆಕೆಯಿಂದ ನೋಡಲು ಆಗುತ್ತಿಲ್ಲ. ಇದು ಯುವತಿ ಯುವಕನ ಮೇಲೆ ಇಟ್ಟಿರುವ ಆಳವಾದ ಪ್ರೀತಿಯನ್ನು ತೋರಿಸುತ್ತದೆ. ಮದುವೆಯಾಗುವುದಾಗಿ ನಂಬಿಸಿಯೇ ಯುವಕ ಲೈಂಗಿಕ ಕ್ರಿಯೆ ನಡೆಸಿದ್ದ ಎನ್ನುವುದನ್ನೂ ಸಾಬೀತು ಮಾಡಲಾಗುವುದಿಲ್ಲ’ ಎಂದು ನ್ಯಾಯಮೂರ್ತಿ ‌ಸಿ.ವಿ ಭದಂಗ್‌ ತೀರ್ಪಿನಲ್ಲಿ ಉಲ್ಲೇಖಿಸಿ ಶಿಕ್ಷೆಯನ್ನು ವಜಾಗೊಳಿಸಿದರು.

Comments are closed.