ರಾಷ್ಟ್ರೀಯ

ಯುವಕನಿಗೆ HIV +ve ಎಂದು ತಪ್ಪು ವರದಿ: ಆಸ್ಪತ್ರೆಗೆ 1 ಲಕ್ಷ ದಂಡ

Pinterest LinkedIn Tumblr


ಕೊಲ್ಕತಾ: ಒಮ್ಮೊಮ್ಮೆ ಆಸ್ಪತ್ರೆಗಳಲ್ಲಿ ಆಗುವ ಎಡವಟ್ಟುಗಳು ರೋಗಿಯ ಕುತ್ತಿಗೆಗೆ ತರುತ್ತವೆ. ಅಂತಹದ್ದೇ ಘಟನೆಯೊಂದು ಕೊಲ್ಕತಾದಲ್ಲಿ ನಡೆದಿದೆ. ಖ್ಯಾತ ಖಾಸಗಿ ಆಸ್ಪತ್ರೆಯೊಂದರ ರಿಪೋರ್ಟ್ ನೋಡಿ ರೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಅವರು ಅದೃಷ್ಟವಶಾತ್ ಬದುಕುಳಿದಿದ್ದಾರೆ.

ಯುವಕನೊಬ್ಬನಿಗೆ ಎಚ್‌ಐವಿ ಪಾಸಿಟೀವ್ ಎಂಬ ರಿಪೋರ್ಟ್ ನೀಡಿತ್ತು ಆಸ್ಪತ್ರೆ ಆಡಳಿತ ಮಂಡಳಿ. ಅದನ್ನು ನೋಡಿ ಇನ್ನು ಬದುಕುವುದರಲ್ಲಿ ಅರ್ಥವಿಲ್ಲ ಎಂದುಕೊಂಡ ಯುವಕ ಆತ್ಮಹತ್ಯೆಗೆ ಮುಂದಾಗಿದ್ದ. ಕಡೆಗೆ ಗೆಳೆಯನೊಬ್ಬ ಆ ಯುವಕನನ್ನು ತಡೆದು ಮತ್ತೊಮ್ಮೆ ಪರೀಕ್ಷಿಸಿದ ಬಳಿಕ ಆ ಯುವಕನಿಗೆ ಏಡ್ಸ್ ಇಲ್ಲ ಎಂಬ ಸತ್ಯ ಗೊತ್ತಾಗಿದೆ.

ಸ್ವಪನ್ ಸಾಹು (ಹೆಸರು ಬದಲಾಯಿಸಲಾಗಿದೆ) ಎಂಬ ಯುವಕ ತನ್ನ ಕಿಡ್ನಿ ದಾನ ಮಾಡಲು ಮುಂದಾಗಿದ್ದ. ಪತ್ರಿಕೆಯೊಂದರಲ್ಲಿ ಬಂದ ಜಾಹೀರಾತು ನೋಡಿ ಅವರು ತಮ್ಮ ಕಿಡ್ನಿ ಕೊಡಲು ಸಿದ್ಧರಾಗಿದ್ದರು. ಈ ಸಂಬಂಧ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಟ್ಟಾಗ ಆಸ್ಪತ್ರೆಯ ರಿಪೋರ್ಟ್ ನೋಡಿ ಶಾಕ್ ಆಗಿದ್ದರು. ಏಡ್ಸ್ ಇರುವುದಾಗಿ ಅದರಲ್ಲಿ ಬರೆಯಲಾಗಿತ್ತು.

ತನಗೆ ಏಡ್ಸ್ ಇರುವ ವರದಿ ನೋಡಿ ಅಲ್ಲೇ ಕುಸಿದು ಬಿದ್ದಿದ್ದ. ಬಳಿಕ ಆತನ ಮದುವೆ ಸಹ ಕ್ಯಾನ್ಸಲ್ ಆಗಿತ್ತು. ಗೆಳೆಯರು, ಕುಟುಂಬದಿಂದಲೂ ದೂರವಾಗಿದ್ದ. ಈ ಎಲ್ಲಾ ಕೊರಗಿನಲ್ಲೇ ಆತ್ಮಹತ್ಯೆಗೆ ಮುಂದಾಗಿದ್ದ ಆ ಯುವಕ. ಆದರೆ ಗೆಳೆಯನೊಬ್ಬನ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಗೆಳೆಯ ಬೇರೊಂದು ಖಾಸಗಿ ಆಸ್ಪತ್ರೆಯಾದ ಸ್ಕೂಲ್ ಆಫ್ ಟ್ರೋಫಿಕಲ್ ಮೆಡಿಸಿನ್‌ನಲ್ಲಿ ಪರೀಕ್ಷಿಸಿದಾಗ ಪ್ರತಿ ಸಲವೂ ನೆಗಟೀವ್ ರಿಪೋರ್ಟ್ ಬಂದಿದೆ. ಅವರಿಗೆ ಏಡ್ಸ್ ಇಲ್ಲ ಎಂಬುದು ಖಚಿತವಾಗಿದೆ. ಇದೀಗ ಸ್ವಪನ್ ಚೇತರಿಸಿಕೊಂಡಿದ್ದು, ತನಗೆ ಏಡ್ಸ್ ಇದೆ ಎಂದು ತಪ್ಪು ಮಾಹಿತಿ ನೀಡಿದ ಆಸ್ಪತ್ರೆ ವಿರುದ್ಧ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದ. ನ್ಯಾಯಮೂರ್ತಿಗಳಾದ ಇಷಾನ್‌ಚಂದ್ರ ದಾಸ್ ಮತ್ತು ತರಪಡ ಗಂಗೂಲಿ ಅವರಿದ್ದ ಪೀಠ 1 ಲಕ್ಷ ರೂ. ಪರಿಹಾರ ನೀಡುವಂತೆ ಖಾಸಗಿ ಆಸ್ಪತ್ರೆಗೆ ಆದೇಶಿಸಿದೆ. ಈ ಘಟನೆಯಿಂದ ಮರುಜನ್ಮ ಪಡೆದಂತಾಗಿದೆ ಎಂದಿದ್ದಾರೆ ಸ್ವಪನ್. (ವರದಿ: ಹಿಮಾದ್ರಿ ಸರ್ಕಾರ್, ಈ ಸಮಯ್)

Comments are closed.