ರಾಷ್ಟ್ರೀಯ

ಪತ್ನಿಯ ಒಪ್ಪಿಗೆ ಇಲ್ಲದ ಸಂಭೋಗ ಅತ್ಯಾಚಾರವಲ್ಲ: ಕೋರ್ಟ್‌

Pinterest LinkedIn Tumblr


ಅಹಮದಾಬಾದ್‌: ಪತ್ನಿಯ ಒಪ್ಪಿಗೆ ಇಲ್ಲದೆ ನಡೆಸುವ ಸಂಭೋಗ ಅತ್ಯಾಚಾರವಲ್ಲ ಎಂದು ಗುಜರಾತ್‌ ಹೈಕೋರ್ಟ್‌ ಮಂಗಳವಾರ ತೀರ್ಪು ನೀಡಿದೆ.

ಈ ಹಿನ್ನೆಲೆಯಲ್ಲಿ ವಿಚಾರಣೆ ನಂತರ ವೈದ್ಯೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಜೆ.ಬಿ.ಪರ್ದಿವಾಲಾ ಅವರು ತಳ್ಳಿ ಹಾಕಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಸನ್‌ 375ರ ಅಡಿ ಪತ್ನಿಯ ಒಪ್ಪಿಗೆ ಇಲ್ಲದೆ ಪತಿ ನಡೆಸುವ ಕಾಮಕ್ರಿಯೆಯನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. 18 ವರ್ಷ ಮೇಲ್ಪಟ್ಟ ಪತ್ನಿಯೊಂದಿಗೆ ಆತನ ಗಂಡ ನಡೆಸುವ ಸಂಭೋಗ ಅತ್ಯಾಚಾರವಾಗುವುದಿಲ್ಲ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.

ಆದರೆ ಪತ್ನಿಯ ಜತೆಗೆ ನಡೆಸುವ ಅಸ್ವಾಭಾವಿಕ ಲೈಂಗಿಕತೆಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಸನ್‌ 377ರ ಅಡಿ ಅಪರಾಧ ಎಂದು ಪರಿಗಣಿಸಬಹುದು ಎಂದು ಕೋರ್ಟ್‌ ತಿಳಿಸಿದೆ.

ಗುಜರಾತ್‌ನ ಸಬರ್ಕಂತಾ ಜಿಲ್ಲೆಯ ಇದರ್‌ ಪೊಲೀಸ್‌ ಠಾಣೆಯಲ್ಲಿ ಮಹಿಳಾ ವೈದ್ಯರೊಬ್ಬರು ತಮ್ಮ ಪತಿಯ ವಿರುದ್ಧ ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ ಮತ್ತು ವರದಕ್ಷಿಣೆ ಕಿರುಕುಳ ಆರೋಪ ಸಂಬಂಧ ಎಫ್‌ಐಆರ್‌ ದಾಖಲಿಸಿದ್ದರು.

ಎಫ್‌ಐಆರ್‌ನಲ್ಲಿ ದಾಖಲಾದ ದೂರು ಮತ್ತು ವಿಚಾರಣೆ ಸಮಯದಲ್ಲಿ ಪತ್ನಿ ನೀಡುತ್ತಿರುವ ಹೇಳಿಕೆ ಒಂದಕ್ಕೊಂದು ತಾಳೆ ಆಗದ ಕಾರಣ ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಹಿಮ್ಮತ್‌ನಗರದ ಡಿಎಸ್‌ಪಿಗೆ ನ್ಯಾಯಾಲಯ ಸೂಚಿಸಿದೆ.

ಇದೇ ಸಮಯದಲ್ಲಿ ವರದಕ್ಷಿಣೆ ಕಿರುಕುಳ ವಿರುದ್ಧ ದಾಖಲಾಗಿರುವ ದೂರನ್ನು ಪುರಸ್ಕರಿಸಿರುವ ನ್ಯಾಯಾಲಯ ವಿಚಾರಣೆ ಮುಂದುವರಿಸಿದೆ. ತನ್ಮಧ್ಯೆ, ರಾಜ್ಯದ ಸಿಐಡಿ ಅಥವಾ ಸಿಬಿಐ ಈ ಪ್ರಕರಣದ ವಿಚಾರಣೆಯನ್ನು ನಡೆಸಬೇಕು ಎಂದು ದೂರದಾರ ಪತ್ನಿಯ ಕೋರಿಕೆಯನ್ನು ಕೋರ್ಟ್‌ ತಿರಸ್ಕರಿಸಿದೆ.

Comments are closed.