ರಾಷ್ಟ್ರೀಯ

ಅಂಬೇಡ್ಕರ್’ಗೆ ನಮ್ಮ ಸರ್ಕಾರ ನೀಡಿದಷ್ಟು ಗೌರವ ಈ ಹಿಂದೆ ಯಾವ ಸರ್ಕಾರವೂ ನೀಡಿಲ್ಲ: ಪ್ರಧಾನಿ ಮೋದಿ

Pinterest LinkedIn Tumblr

ನವದೆಹಲಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಧ್ವಂಸ ಮತ್ತು ಅವಮಾನ ಪ್ರಕರಣಗಳನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದಲಿತ ನಾಯಕನಿಗೆ ನಮ್ಮ ಸರ್ಕಾರ ನೀಡಿದಷ್ಟು ಗೌರವ ಈ ಹಿಂದೆ ಯಾವ ಸರ್ಕಾರವೂ ನೀಡಿಲ್ಲ ಎಂದು ಬುಧವಾರ ಹೇಳಿದ್ದಾರೆ.

ಇಂದು ಸಂಸದರ ವಸತಿಗಾಗಿ ನಿರ್ಮಿಸಿದ ವೆಸ್ಟರ್ನ್ ಕೋರ್ಟ್ ಅನೆಕ್ಸ್ ಅನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಅಂಬೇಡ್ಕರ್ ಅವರ ಕನಸಿನ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ನಮ್ಮ ಸರ್ಕಾರ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಿದೆ ಎಂದರು.

ಅಂಬೇಡ್ಕರ್ ಅವರು ನಿಧನರಾದ ನಂಬರ್ 26, ಅಲಿಪುರ್ ರಸ್ತೆ ಹೌಸ್ ಅನ್ನು ಏಪ್ರಿಲ್ 13ರಂದು ದೇಶಕ್ಕೆ ಸಮರ್ಪಿಸುವ ಮೂಲಕ ಅವರ ಜನ್ಮದಿನ ಆಚರಿಸಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ.

ರಾಜಕೀಯ ಲಾಭಕ್ಕಾಗಿ ಪ್ರತಿಯೊಬ್ಬರು ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.

ನಾನು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ತೋರಿಸಿದ ದಾರಿಯಲ್ಲೇ ನಡೆಯುತ್ತಿದ್ದೇನೆ. ಅಂಬೇಡ್ಕರ್ ಅವರ ಆದರ್ಶಗಳನ್ನು, ಪ್ರಮುಖವಾಗಿ ಸಾಮರಸ್ಯ ಮತ್ತು ಒಗ್ಗಟ್ಟನ್ನು ನಾವು ಪಾಲಿಸುತ್ತಿದ್ದೇವೆ. ಬಡವರು ಮತ್ತು ಅತ್ಯಂತ ಬಡವರಿಗಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಕಳೆದ ಮಾರ್ಚ್‌ 20ರಂದು ಸುಪ್ರೀಂ ಕೋರ್ಟ್ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳಿಗೆ ತಮ್ಮ ಕರ್ತವ್ಯಗಳನ್ನು ನಿರ್ಭಯದಿಂದ ನಿರ್ವಹಿಸಲು ಮತ್ತು ಬ್ಲಾಕ್‌ ಮೇಲ್‌ಗೆ ಗುರಿಯಾಗುವುದನ್ನು ತಪ್ಪಿಸಲು ಎಸ್‌ಸಿ/ಎಸ್‌ಟಿ ಕಾಯಿದೆಯ ಕಾಠಿನ್ಯವನ್ನು ಕಡಿಮೆ ಮಾಡುವ ಆದೇಶವನ್ನು ಪ್ರಕಟಿಸಿತ್ತು. ಇದರಿಂದಾಗಿ ಎಸ್‌ಸಿ/ಎಸ್‌ಟಿ ಕಾಯಿದೆ ದುರ್ಬಲವಾಯಿತೆಂದು ಭಾವಿಸಿ ದಲಿತ ಪರ ಸಂಘಟನೆಗಳು ಸೋಮವಾರ ಭಾರತ್ ಬಂದ್ ಕರೆ ನೀಡಿದ್ದವು.

ಭಾರತ್‌ ಬಂದ್‌ ಹಿಂಸಾತ್ಮಕ ಪ್ರತಿಭಟನೆಯಲ್ಲಿ ದೇಶಾದ್ಯಂತ 10 ಮಂದಿ ಮೃತಪಟ್ಟಿದ್ದರು ಮತ್ತು ಪೊಲೀಸರು ಸೇರಿದಂತೆ 65 ಮಂದಿ ಗಾಯಗೊಂಡಿದ್ದರು.

Comments are closed.