ರಾಷ್ಟ್ರೀಯ

50 ಕೋಟಿಗೂ ಅಧಿಕ ಸಾಲ ಪಡೆಯಲು ಪಾಸ್‌ಪೋರ್ಟ್‌ ಕಡ್ಡಾಯ!

Pinterest LinkedIn Tumblr


ಹೊಸದಿಲ್ಲಿ: ಸಾವಿರಾರು ಕೋಟಿ ರೂ.ಗಳ ಸಾಲ ಮಾಡಿ ಬಳಿಕ ವಿದೇಶಕ್ಕೆ ಪಲಾಯನ ಮಾಡುತ್ತಿದ್ದ ಉದ್ಯಮಿಗಳಿಂದ ರೋಸಿ ಹೋಗಿರುವ ಸರಕಾರ ಇದೀಗ 50 ಕೋಟಿ ರೂ.ಗಿಂತಲೂ ಅಧಿಕ ಸಾಲ ಪಡೆದುಕೊಳ್ಳಲು ಪಾಸ್‌ಪೋರ್ಟ್‌ ಮಾಹಿತಿಯನ್ನು ಹಂಚಿಕೊಳ್ಳುವಂತೆ ಆದೇಶ ಹೊರಡಿಸಿದೆ.

ಯಾವುದೇ ಬ್ಯಾಂಕ್‌ನಿಂದ 50 ಕೋಟಿ ರೂ.ಗಿಂತಲೂ ಅಧಿಕ ಸಾಲವನ್ನು ಪಡೆದುಕೊಳ್ಳಲು ಪಾಸ್‌ಪೋರ್ಟ್‌ ಕಡ್ಡಾಯ ಮಾಡಲಾಗಿದೆ. ಮೋಸ ವಂಚನೆಗಳನ್ನು ತಡೆಯುವ ಸಲುವಾಗಿ ಸಾಲ ಪಡೆಯಲು ಪಾಸ್‌ಪೋರ್ಟ್‌ ಕಡ್ಡಾಯ ಮಾಡಲಾಗುತ್ತಿದೆ. ಈ ರೀತಿ ಮಾಡುವುದರಿಂದ ಬ್ಯಾಂಕ್‌ಗಳು ಸೂಕ್ತ ಅಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಿ ಆಗಬಹುದಾದ ಮೋಸವನ್ನು ತಡೆಗಟ್ಟ ಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.

ವಂಚನೆ ಪ್ರಕರಣದಲ್ಲಿ ಕ್ಷಿಪ್ರವಾಗಿ ಕ್ರಮ ಕೈಗೊಳ್ಳಲು ಬ್ಯಾಂಕಿಂಗ್ ಕ್ಷೇತ್ರದ ಮುಂದಿನ ಹೆಜ್ಜೆಯಾಗಿ 50 ಕೋ.ರೂ.ಗಿಂತ ಹೆಚ್ಚಿನ ಸಾಲಕ್ಕೆ ಪಾಸ್‌ಪೋರ್ಟ್‌ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ನಾವು ಸ್ವಚ್ಛ ಬ್ಯಾಂಕಿಂಗ್‌ ವ್ಯವಹಾರ ಮಾಡಬಹುದು” ಎಂದು ಹಣಕಾಸು ಸೇವಾ ಕಾರ್ಯದರ್ಶಿ ರಾಜೀವ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಅಲ್ಲದೇ ಈಗಾಗಲೇ 50 ಕೋಟಿ ರೂ.ಗೂ ಅಧಿಕ ಸಾಲ ಮಾಡಿರುವ ಉದ್ಯಮಿಗಳ ಪಾಸ್‌ಪೋರ್ಟ್‌ ಮಾಹಿತಿಯನ್ನು ಪಡೆದುಕೊಳ್ಳುವಂತೆ ಬ್ಯಾಂಕ್‌ಗಳಿಗೆ 45 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ರಾಜೀವ್‌ ತಿಳಿಸಿದ್ದಾರೆ.

ಪಾಸ್‌ಪೋರ್ಟ್‌ ವಿವರದ ಕೊರತೆಯಿಂದಾಗಿಯೇ ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಜಯ್ ಮಲ್ಯ ಹಾಗೂ ಜತಿನ್ ಮೆಹ್ತಾರಂತಹ ಹಲವು ಭಾರೀ ಸಾಲ ಬಾಕಿದಾರರು ವಿದೇಶಕ್ಕೆ ಪರಾರಿಯಾಗಿದ್ದನ್ನು ನಾವು ಇಲ್ಲಿ ನೆನೆಸಿಕೊಳ್ಳಬಹುದು.

Comments are closed.