ರಾಷ್ಟ್ರೀಯ

ರಾಷ್ಟ್ರೀಯ ಹೆದ್ದಾರಿಯಲ್ಲಿ ಸೂಟ್ ಕೇಸ್‍ವೊಂದರಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

Pinterest LinkedIn Tumblr

ಚಂಡೀಘಡ: ಹರಿಯಾಣದ ರೆವಾರಿ ಜಿಲ್ಲೆಯ ದೆಹಲಿ-ಜೈಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೂಟ್ ಕೇಸ್‍ವೊಂದರಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಬಾವಲ್ ಪಟ್ಟಣಕ್ಕೆ ಸಮೀಪದ ಓಧಿ ಹಳ್ಳಿಯ ಬಳಿಯ ಒಂದು ಹಳ್ಳದಲ್ಲಿ ಭಾನುವಾರ ಸಂಜೆ ಸೂಟ್ ಕೇಸ್ ಪತ್ತೆಯಾಗಿದ್ದು, ಅದರಲ್ಲಿ ಮಹಿಳೆಯೊಬ್ಬರ ದೇಹವಿತ್ತು. ಆದರೆ ಅವರ ಗುರುತು ಪತ್ತೆಯಾಗಿಲ್ಲ. ಮೃತದೇಹದ ಮೇಲೆ ಗಾಯದ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣವನ್ನು ಕೊಲೆ ಎಂದು ಪರಿಗಣಿಸಲಾಗಿದೆ. ಬಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಪ್ರಾರಂಭಿಸಲಾಗಿದೆ. ಆದ್ದರಿಂದ ಮೃತದೇಹವನ್ನು ಬಾವಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.

ಮಹಿಳೆಯನ್ನು ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಕೆ ಸಾವನ್ನಪ್ಪಿದ ನಂತರ ಆರೋಪಿಗಳು ಆಕೆಯನ್ನು ಸೂಟ್‍ಕೇಸ್ ನಲ್ಲಿ ಇಟ್ಟು ಬಿಸಾಕಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಮರಣೋತ್ತರ ಪರೀಕ್ಷೆಯ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಕುಮಾರ್ ಹೇಳಿದ್ದಾರೆ.

ಭಾನುವಾರ ಬೆಳಗ್ಗೆ ಚಕ್ರಗಳನ್ನು ಹೊಂದಿದ್ದ ಸೂಟ್‍ಕೇಸ್ ಓಧಿ ಗ್ರಾಮದ ಬಳಿ ರಸ್ತೆಬದಿಯ ಹಳ್ಳದಲ್ಲಿ ಬಿದ್ದಿರುವುದನ್ನು ಗ್ರಾಮಸ್ಥರು ಗಮನಿಸಿದ್ದರು. ಆದರೆ ಸೂಟ್‍ಕೇಸನ್ನು ಯಾರೂ ಮುಟ್ಟಿರಲಿಲ್ಲ. ಸಂಜೆಯವರೆಗೂ ಕಾದು ನೋಡಿದ್ರೂ ಯಾರೂ ಸೂಟ್‍ಕೇಸ್ ತೆಗೆದುಕೊಳ್ಳಲು ಬರಲಿಲ್ಲ. ಬಳಿಕ ಗ್ರಾಮಸ್ಥರು ಸಂಜೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮಸ್ಥರಿಂದ ಮಾಹಿತಿ ತಿಳಿದ ಬಾವಲ್ ಪೊಲೀಸ್ ತಂಡ ಸ್ಥಳಕ್ಕೆ ಹೋಗಿದ್ದಾರೆ. ನಂತರ ಸೂಟ್ ಕೇಸ್ ತೆರೆದು ನೋಡಿದಾಗ ಮಹಿಳೆಯ ದೇಹ ಪತ್ತೆಯಾಗಿದೆ. ಮೃತ ಮಹಿಳೆ ಸುಮಾರು ಐದು ಅಡಿ ಎತ್ತರವಿದ್ದು, ನೈಟಿ ಧರಿಸಿದ್ದರು.

ಅಪರಿಚಿತ ಮೃತದೇಹ ಮತ್ತು ಸೂಟ್ ಕೇಸ್ ಬಗ್ಗೆ ಹರಿಯಾಣ, ದೆಹಲಿ ಮತ್ತು ರಾಜಸ್ಥಾನದ ಹತ್ತಿರದ ಜಿಲ್ಲೆಗಳಿಗೆ ಮಾಹಿತಿ ನೀಡಲಾಗಿದೆ. ಬಾವಾಲ್, ರೆವಾರಿ ನಗರದಿಂದ 14 ಕಿ.ಮೀ ಮತ್ತು ಗುರ್ಗಾಂವ್ ನಿಂದ 60 ಕಿ.ಮೀ. ದೂರದಲ್ಲಿದೆ. ಈ ಪ್ರಕರಣವನ್ನು ಕೊಲೆ ಎಂದು ಪರಿಗಣಿಸಿ, ಆರೋಪಿಗಾಗಿ ಶೋಧಕಾರ್ಯ ಮಾಡಲಾಗುತ್ತಿದೆ ಎಂದು ಕುಮಾರ್ ಹೇಳಿದ್ದಾರೆ.

Comments are closed.