
ರಾಯ್‍ಪುರ: ಜನರ ರಕ್ಷಣೆ ಮಾಡಬೇಕಾದ ಪೊಲೀಸರೇ ಸಾರ್ವಜನಿಕರನ್ನು ಸುಲಿಗೆ ಮಾಡಲು ನಿಂತಿರುವ ಪ್ರಕರಣವೊಂದು ಛತ್ತೀಸ್‍ಗಢದಲ್ಲಿ ಬೆಳಕಿಗೆ ಬಂದಿದೆ.
ಜಗದಲ್‍ಪುರ ಜಿಲ್ಲೆಯ ಸಂಭಾಗ ವಿಭಾಗದ ಗ್ರಾಮವೊಂದರಲ್ಲಿ ಪೊಲೀಸರು ಬಡವರಿಂದ ಹಣ ಸುಲಿಗೆಗೆ ನಿಂತಿದ್ದಾರೆ ಎನ್ನುವ ಆರೋಪ ಈಗ ಕೇಳಿ ಬಂದಿದೆ.
ಹೋಳಿ ಹಬ್ಬದ ಮೊದಲು ಬಡ ರೈತರೊಬ್ಬರು 35 ಹುಂಜ ಮತ್ತು ಕೋಳಿಗಳನ್ನು ತಮ್ಮ ಸೈಕಲ್ ಮೇಲೆ ಹಾಕಿಕೊಂಡು ಮಾರಲು ಸಂಭಾಗ ಮಾರುಕಟ್ಟೆ ಬರುತ್ತಿದ್ದರು. ಮಾರ್ಗ ಮಧ್ಯೆ ಇಂದ್ರಾವತಿ ನದಿಯ ಸೇತುವೆ ಬಳಿ ಪೊಲೀಸ್ ಅಧಿಕಾರಿಯೊಬ್ಬರು ಅಡ್ಡಗಟ್ಟಿ ಎಲ್ಲ ಹುಂಜ ಮತ್ತು ಕೋಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹುಂಜಗಳನ್ನು ವಶಕ್ಕೆ ಪಡೆದಿದ್ದು ಯಾಕೆ?: ಪೊಲೀಸರು ತನ್ನ ಎಲ್ಲ ಕೋಳಿ ಮತ್ತು ಹುಂಜಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ರೈತ ಪ್ರಶ್ನೆ ಮಾಡಿದ್ದಾರೆ. ಕೋಳಿಗಳನ್ನು ಸೈಕಲ್ ನಲ್ಲಿ ತಲೆ ಕೆಳಗಾಗಿ ಕಟ್ಟಿಕೊಂಡು ಬಂದಿದ್ದರಿಂದ ವಶಕ್ಕೆ ಪಡೆಯಲಾಗಿದೆ ಅಂತಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ರೈತನನ್ನು ಸಹ ವಶಕ್ಕೆ ಪಡೆದ ಪೊಲೀಸ್ ಕೆಲಹೊತ್ತು ಠಾಣೆಯಲ್ಲಿ ಕೂರಿಸಿ, ಬರಿಗೈಯಲ್ಲಿ ಕಳುಹಿಸಿದ್ದಾರೆ.
ಹಣ ಕೊಡಲಿಲ್ಲ: ಸದ್ಯ ಮಾರುಕಟ್ಟೆ ಕೋಳಿ ಮಾಂಸಕ್ಕೆ 300 ರಿಂದ 350 ರೂ.ವರೆಗೆ ಸಿಗುತ್ತದೆ. ಪೊಲೀಸರು ತನ್ನ 35 ಕೋಳಿಗಳನ್ನು ವಶ ಪಡೆದಿರುವುದರಿಂದ ಅಂದಾಜು 15 ಸಾವಿರ ರೂ. ನಷ್ಟವಾಗಿದೆ. ಠಾಣೆಗೆ ಕೋಳಿಗಳನ್ನು ತರುತ್ತಿದ್ದಂತೆ ಎಲ್ಲ ಪೊಲೀಸ್ ಸಿಬ್ಬಂದಿ ಒಂದು, ಎರಡು ಲೆಕ್ಕದಂತೆ ಮನೆಗೆ ತೆಗೆದುಕೊಂಡು ಹೋದ್ರು. ಆದ್ರೆ ಒಬ್ಬರೂ ಹಣ ನೀಡಲಿಲ್ಲ ಅಂತಾ ರೈತ ಹೇಳಿಕೊಂಡಿದ್ದಾರೆ.
ಸ್ಥಳೀಯರ ಪ್ರಕಾರ, ಸಂಭಾಗನಲ್ಲಿ ಭಾನುವಾರದಂದು ನಡೆಯುವ ಸಂತೆಯಲ್ಲಿ ಇಂತಹ ಘಟನೆಗಳನ್ನು ಈ ಹಿಂದೆಯೂ ನಡೆದಿದೆ. ಪೊಲೀಸರು ಹಣ ನೀಡದೇ ಕೋಳಿಗಳನ್ನು ತೆಗೆದುಕೊಂಡು ಹೋಗಿ ಭರ್ಜರಿಯಾಗಿ ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ. ಕೆಲವು ಬಾರಿ ಪೊಲೀಸರು ಜನರಿಂದ ಹಣ ಸಹ ವಸೂಲಿ ಮಾಡಿದ್ದಾರೆ ಅಂತಾ ಸಾರ್ವಜನಿಕರು ಆರೋಪಿಸಿದ್ದಾರೆ.
ಈ ತರಹದ ಘಟನೆಗಳು ನಡೆಯಲು ಸಾಧ್ಯವೇ ಇಲ್ಲ. ಒಂದು ವೇಳೆ ಯಾವುದೇ ಪೊಲೀಸ್ ಅಧಿಕಾರಿ ಜನರಿಂದ ಹಣ ವಸೂಲಿ ಮಾಡಿದ್ದರೆ ಸಂಬಂಧಪಟ್ಟ ಠಾಣೆಯಲ್ಲಿ ದೂರು ದಾಖಲಿಸಬಹುದು. ಇದೂವರೆಗೂ ಅಂತಹ ದೂರುಗಳು ದಾಖಲಾಗಿಲ್ಲ, ಆದ್ರೂ ಈ ಬಗ್ಗೆ ತನಿಖೆ ನಡೆಸಲಾಗುವುದು ಅಂತಾ ಕೋತವಾಲಿ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಖಾದೀರ್ ಖಾನ್ ತಿಳಿಸಿದ್ದಾರೆ.
Comments are closed.