
ಹೊಸದಿಲ್ಲಿ: ಈಶಾನ್ಯ ರಾಜ್ಯಗಳ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ, ಇಟಲಿ ಪ್ರವಾಸಕ್ಕೆ ತೆರಳಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪರೋಕ್ಷ ವಾಗ್ದಾಳಿ ನಡೆಸಿದರು.
ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ಚುನಾವಣೆ ಫಲಿತಾಂಶಗಳ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಮಿತ್ ಶಾ, ‘ಇಟಲಿಯಲ್ಲಿ ಚುನಾವಣೆ ನಡೆಯಲಿಕ್ಕಿದೆ ಎಂದು ನನಗೆ ವಾಟ್ಸಪ್ ಸಂದೇಶ ಬಂದಿದೆ’ ಎಂದು ಅಣಕವಾಡಿದರು.
‘ರಾಹುಲ್ ಗಾಂಧಿ ಚಾಣಾಕ್ಷ ಚುನಾವಣಾ ತಂತ್ರಗಾರ’ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕೂಡ ವ್ಯಂಗ್ಯವಾಡಿದ್ದಾರೆ. ಈಶಾನ್ಯ ರಾಜ್ಯಗಳ ಚುನಾವಣೆ ಫಲಿತಾಂಶಗಳು ಪ್ರಕಟವಾಗುವ ಹೊತ್ತಿನಲ್ಲಿ ದೇಶ ಬಿಟ್ಟು ಇಟಲಿಗೆ ತೆರಳಿದ ಕಾಂಗ್ರೆಸ್ ಅಧ್ಯಕ್ಷರ ಹೊಣೆಗಾರಿಕೆಯನ್ನು ಅವರು ಪ್ರಶ್ನಿಸಿದರು.
ಈ ವಾರದ ಆರಂಭದಲ್ಲಿ ಇಟಲಿಯಲ್ಲಿರುವ ಅಜ್ಜಿಮನೆಗೆ ರಾಹುಲ್ ತೆರಳಿದ್ದರು. 93 ವರ್ಷದ ಅಜ್ಜಿಯನ್ನು ನೋಡಿ ಬರುವುದಾಗಿ ಹೇಳಿ ಇಟಲಿಗೆ ಹಾರಿದ್ದರು.
‘ನನ್ನ ಅಜ್ಜಿಗೆ 93 ವರ್ಷ. ಅವರು ಅತ್ಯಂತ ಕರುಣಾಮಯಿ. ಹೋಳಿ ಹಬ್ಬದ ವಾರಾಂತ್ಯವನ್ನು ಅಜ್ಜಿ ಮನೆಯಲ್ಲಿ ಕಳೆದು ಬರುತ್ತೇನೆ. ಅಜ್ಜಿಯನ್ನು ಆಲಿಂಗಿಸಿಕೊಂಡು ಹೋಳಿ ಶುಭಾಶಯ ಹೇಳಿ ಬರುತ್ತೇನೆ’ ಎಂದು ರಾಹುಲ್ ಗುರುವಾರ ಟ್ವೀಟ್ ಮಾಡಿದ್ದರು.
ಈಶಾನ್ಯ ರಾಜ್ಯವಾದ ತ್ರಿಪುರಾದಲ್ಲಿ 25 ವರ್ಷಗಳ ಕಮ್ಯೂನಿಸ್ಟ್ ಆಡಳಿತ ಕೊನೆಗೊಳಿಸಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ನಾಗಾಲ್ಯಾಂಡ್‌ನಲ್ಲೂ ಬಿಜೆಪಿ ಮೈತ್ರಿಕೂಟ ಬಹುಮತ ಗಳಿಸಿದೆ. ಮೇಘಾಲಯದಲ್ಲಿ ಮಾತ್ರ ಅತಂತ್ರ ಸ್ಥಿತಿ ತಲೆದೋರಿದೆ. ಅಧಿಕಾರದಲ್ಲಿದ್ದ ಕಾಂಗ್ರೆಸ್ ಬಹುಮತ ಗಳಿಸಲು ವಿಫಲವಾಗಿದೆ.
Comments are closed.