ರಾಷ್ಟ್ರೀಯ

ಮಗಳ ಸಾವಿಗಿಂತ ಸಾವಿನಂಚಿನಲ್ಲಿದ್ದ ವ್ಯಕ್ತಿಯನ್ನು ಬದುಕಿಸಿ ಕರ್ತವ್ಯ ಪ್ರಜ್ಞೆ ಮೆರೆದ ಪೊಲೀಸ್ ಪೇದೆ !

Pinterest LinkedIn Tumblr

ಮೀರತ್‌: ಆವತ್ತು ಫೆಬ್ರವರಿ 23. ಬೆಳಗ್ಗೆ 9 ಗಂಟೆ. 57 ವರ್ಷದ ಹೆಡ್‌ ಕಾನ್‌ಸ್ಟೇಬಲ್‌ ಭೂಪೇಂದ್ರ ತೋಮರ್‌ ಮತ್ತು ಅವರ ತಂಡ ಉತ್ತರ ಪ್ರದೇಶದ ತುರ್ತು ಕರೆ ವಾಹನದಲ್ಲಿ ಕುಳಿತು ಸಹರಣ್‌ಪುರದಲ್ಲಿ ಗಸ್ತು ನಿರತರಾವಾಗಿತ್ತು. ಬದಗಾಂವ್‌ ಪ್ರದೇಶದಲ್ಲಿ ಸಾಗುತ್ತಿದ್ದಂತೆಯೇ ಒಂದು ಕರೆ ಬಂತು, ದುಷ್ಕರ್ಮಿಯೊಬ್ಬನಿಂದ ಇರಿತಕ್ಕೆ ಒಳಗಾದ ವ್ಯಕ್ತಿ ರಸ್ತೆ ಮಧ್ಯೆ ಜೀವನ್ಮರಣ ಹೋರಾಟ ಮಾಡುತ್ತಿದ್ದಾನೆ ಅಂತ. ಕರೆ ಸ್ವೀಕರಿಸಿದ ಕೂಡಲೇ ವಾಹನ ಅತ್ತ ದೌಡಾಯಿಸಿತು.

ಒಂದೆರಡು ಕ್ಷಣದಲ್ಲಿ ಭೂಪೇಂದ್ರ ಅವರಿಗೆ ಮತ್ತೊಂದು ಕರೆ ಬಂತು. ಅದು ಬಂದಿದ್ದು ಮನೆಯಿಂದ. ವರ್ಷದ ಹಿಂದಷ್ಟೇ ಮದುವೆಯಾಗಿದ್ದ, ಭೂಪೇಂದ್ರ ಅವರ 27 ವರ್ಷದ ಮಗಳು ಜ್ಯೋತಿ ಆಕಸ್ಮಿಕವಾಗಿ ಪ್ರಾಣ ಕಳೆದುಕೊಂಡಿದ್ದ ಸುದ್ದಿ ತಿಳಿಯಿತು. ನರ್ಸ್‌ ಆಗಿದ್ದ ಪ್ರೀತಿಯ ಮಗಳ ಸಾವು ಒಂದು ಕಡೆಯಾದರೆ, ಸಾವು ಬದುಕಿನ ನಡುವೆ ಇರುವ ವ್ಯಕ್ತಿ ಇನ್ನೊಂದೆಡೆ. ಆದರೆ, ಭೂಪೇಂದ್ರ ಅವರು ಆಘಾತಕ್ಕೆ ಒಳಗಾದರೂ ಹೆಚ್ಚು ವಿಚಲಿತರಾಗಲಿಲ್ಲ.

ತಂಡದಲ್ಲಿದ್ದ ಇತರ ಸಹೋದ್ಯೋಗಿಗಳು ಮನೆಗೆ ಹೋಗೋಣ ಎಂದು ವಾಹನ ತಿರುಗಿಸಲು ಮುಂದಾದರು. ಆದರೆ, ಭೂಪೇಂದ್ರ ನಿಲುವು ಸ್ಪಷ್ಟವಾಗಿತ್ತು. ಮಗಳೇನೋ ಸತ್ತು ಹೋಗಿದ್ದಾಳೆ. ಆದರೆ, ಸಾವು ಬದುಕಿನಲ್ಲಿರುವ ವ್ಯಕ್ತಿಯ ಜೀವವೇ ಮುಖ್ಯ ಎಂದು ಅವರು ವಾಹನ ತಿರುಗಿಸದಂತೆ ಮನವಿ ಮಾಡಿದರು. ಉಕ್ಕಿ ಬರುತ್ತಿದ್ದ ಕಣ್ಣೀರನ್ನು ಅವುಡುಗಚ್ಚಿಯೇ ನಿಯಂತ್ರಿಸಿದ ಭೂಪೇಂದ್ರ ರಸ್ತೆ ಮಧ್ಯೆ ಬಿದ್ದಿದ್ದ ವ್ಯಕ್ತಿಯ ಕಡೆಗೆ ಧಾವಿಸಿದರು. ಅವನನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ ಬಳಿಕವೇ ಮನೆ ದಾರಿ ಹಿಡಿದರು. ಭೂಪೇಂದ್ರ ತೋರಿದ ಕರ್ತವ್ಯ ನಿಷ್ಠೆ ಒಬ್ಬ ಪಶುವೈದ್ಯನ ಜೀವವನ್ನು ರಕ್ಷಿಸಿತು.

”ಮಗಳು ಸತ್ತಿರುವುದೇನೋ ನಿಜ. ಆದರೆ, ಸಾವಿನಂಚಿನಲ್ಲಿರುವ ವ್ಯಕ್ತಿಯನ್ನು ಬದುಕಿಸುವುದೇ ಮುಖ್ಯ ಅನಿಸಿತು. ನಾನು ಅತಿಶಯವಾದುದನ್ನು ಮಾಡಿದ್ದೇನೆ ಅಂತ ಅನಿಸುವುದಿಲ್ಲ,” ಎಂದು ಬಿಜನೋರ್‌ ನಿವಾಸಿಯಾಗಿರುವ ಭೂಪೇಂದ್ರ ಗದ್ಗದ ಕಂಠದಲ್ಲಿ ಹೇಳುತ್ತಾರೆ.

ಸಾವು-ಬದುಕಿನ ಧರ್ಮ ಸಂಕಟದ ನಡುವೆ ಕರ್ತವ್ಯ ಪ್ರಜ್ಞೆಯೇ ಶ್ರೇಷ್ಠ ಎಂಬ ನಿಲುವಿನೊಂದಿಗೆ ಪೊಲೀಸ್‌ ಇಲಾಖೆಯ ಕರ್ತೃತ್ವ ಶಕ್ತಿಯನ್ನು ಎತ್ತಿ ಹಿಡಿದ ಭೂಪೇಂದ್ರ ಅವರನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.

Comments are closed.