ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಈಶಾನ್ಯ ಭಾರತದ ಮೂರು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ತ್ರಿಪುರಾದಲ್ಲಿ ಬಿಜೆಪಿ ಮತ್ತು ಎಡಪಕ್ಷಗಳ ನಡುವೆ ತೀವ್ರ ಪೈಪೋಟಿ ಎದುರಾಗಿದೆ.
ಒಟ್ಟು 59 ಸ್ಥಾನಗಳ ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಳೆದ 25 ವರ್ಷಗಳಿಂದ ಆಡಳಿತದ ಚುಕ್ಕಾಣಿ ಹಿಡಿದಿರುವ ಸಿಪಿಎಂಗೆ ಈ ಬಾರಿ ಚುನಾವಣೆಯಲ್ಲಿ ಹಿನ್ನಡೆ ಕಂಡು ಬಂದಿದೆ. ಎಡಪಕ್ಷಗಳು ಒಟ್ಟು 24 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಕಳೆದ ಬಾರಿಯ ಚುನಾವಣೆಗೆ ಹೋಲಿಕೆ ಮಾಡಿದರೆ ತ್ರಿಪುರಾದಲ್ಲಿ ಬಿಜೆಪಿ ಗಣನೀಯ ಸಾಧನೆ ಗೈದಿದ್ದು, ಕಳೆದ ಬಾರಿಗಿಂತ ಈ ಬಾರಿ 35 ಸ್ಥಾನಗಳಲ್ಲಿ ಭಾರಿ ಮುನ್ನಡೆ ಸಾಧಿಸಿದೆ.
ಇನ್ನು 59 ಸ್ಥಾನಗಳನ್ನು ಹೊಂದಿರುವ ಮೇಘಾಲಯದಲ್ಲಿ ಕಾಂಗ್ರೆಸ್ 22 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಎನ್ ಪಿಪಿ 15 ಮತ್ತು ಬಿಜೆಪಿ 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇತರರು 14 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ನಾಗಾಲ್ಯಾಂಡ್ ನ 60 ವಿಧಾನಸಭಾ ಕ್ಷೇತ್ರಗಳ ಪೈಕಿ, ಎನ್ ಪಿಎಫ್ ಮೈತ್ರಿಕೂಟ 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಎನ್ ಡಿಪಿಪಿ ಮೈತ್ರಿಕೂಟ 28 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಒಟ್ಟಾರೆ ಈಶಾನ್ಯ ಭಾರತ ಚುನಾವಣೆಯಲ್ಲಿ ಬಿಜೆಪಿ ಪ್ರಗತಿದಾಯಕ ಪ್ರದರ್ಶನ ತೋರುವಂತೆ ಕಾಣುತ್ತಿದೆ.