ಪಾಟ್ನಾ: ಬಿಹಾರದ ಮುಜಾಫರ್ ಪುರ್ ದಲ್ಲಿ ಒಂಬತ್ತು ಶಾಲಾ ಮಕ್ಕಳ ಸಾವಿಗೆ ಕಾರಣವಾದ ಬಿಜೆಪಿ ನಾಯಕ ಮನೋಜ್ ಬೈತಾ ಅವರ ವಿರುದ್ಧ ಎಫ್ ಐಆರ್ ದಾಖಲಿಸಿರುವುದಾಗಿ ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಧರಮಂಪುರ್ ಗ್ರಾಮದ ನಿವಾಸಿ ಮೋಹ್ ಅನ್ಸಾರಿ ಅವರ ನೀಡಿದ ದೂರಿನ ಆಧಾರ ಮೇಲೆ ನಾವು ನಾಪತ್ತೆಯಾಗಿರುವ ಮನೋಜ್ ಬೈತಾ ಅವರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದೇವೆ ಎಂದು ಮೀನಾಪುರ್ ಪೊಲೀಸ್ ಠಾಣೆಯ ಅಧಿಕಾರಿ ಸೋನಾ ಪ್ರಸಾದ್ ಸಿಂಗ್ ಅವರು ಹೇಳಿದ್ದಾರೆ.
ಆರೋಪಿ ಬಿಜೆಪಿ ನಾಯಕನನ್ನು ಬಂಂಧಿಸುವುದಕ್ಕಾಗಿ ಸಿತಾಮರ್ಹಿ ಜಿಲ್ಲೆಯ ಆತನ ನಿವಾಸದಲ್ಲಿ ನಾವು ಶೋಧ ನಡೆಸಿದ್ದೇವೆ. ಆದರೆ ಆರೋಪಿ ತಲೆಮರೆಸಿಕೊಂಡಿರುವುದಾಗಿ ಸಿಂಗ್ ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ವೇಳೆ ಸ್ವತಃ ಬೈತಾ ಅವರೇ ಬೊಲೊರೊ ವಾಹನ ಚಾಲನೆ ಮಾಡುತ್ತಿದ್ದರು ಎಂದು ಅನ್ಸಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಶನಿವಾರ ನಡೆದ ಭೀಕರ ಅಪಘಾತದಲ್ಲಿ ಅನ್ಸಾರಿ ಅವರು ಐವರು ಮೊಮ್ಮಕಳನ್ನು ಕಳೆದುಕೊಂಡಿದ್ದಾರೆ.
ಬೈತಾ ಚಾಲನೆ ಮಾಡುತ್ತಿದ್ದ ಬೊಲೆರೊ ವಾಹನ ನಿಯಂತ್ರಣ ಕಳೆದುಕೊಂಡು ಶಾಲಾ ಮಕ್ಕಳತ್ತ ನುಗ್ಗಿದ ಪರಿಣಾಮ 9 ಮಕ್ಕಳು ಸಾವನ್ನಪ್ಪಿದ್ದವು ಮತ್ತು 20 ಮಕ್ಕಳು ಗಾಯಗೊಂಡಿದ್ದರು.
ಮುಜಾಫರ್ ಪುರದ ಹೊರವಲಯದ ಸರ್ಕಾರಿ ಶಾಲೆಯ ಮಕ್ಕಳು ಮನೆಗೆ ತೆರಳಲು ಶಾಲೆಯ ಹೊರಗೆ ನಿಂತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹೃದಯವಿದ್ರಾವಕ ಘಟನೆ ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿ.ಮೀ. ದೂರದ ಮಿನಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಹಿಯಾಪುರ್-ಝಾಪಾಹಾ ಪ್ರದೇಶದಲ್ಲಿ ನಡೆದಿದೆ.