ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಒಂದಲ್ಲಾ ಒಂದು ಯಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತದೆ. ಈಗ ನಿಧನರಾಗಿರುವ ಶ್ರೀದೇವಿ ಕುರಿತು ಟ್ವೀಟ್ ಮಾಡಲು ಹೋಗಿ ಕಾಂಗ್ರೆಸ್ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ.
ಶ್ರೀದೇವಿ ನಿಧನಕ್ಕೆ ಸಂತಾಪ ಸೂಚಿಸಿರುವ ಕಾಂಗ್ರೆಸ್ 2013 ರಲ್ಲಿ ಯುಪಿಎ ಸರ್ಕಾರ ಶ್ರೀದೇವಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ್ದಾಗಿ ಹೇಳಿಕೊಂಡಿದೆ. “ಶ್ರೀದೇವಿ ಅವರ ನಿಧನದ ವಾರ್ತೆ ಕೇಳಲು ವಿಷಾದಿಸುತ್ತೇವೆ, ಶ್ರೀದೇವಿ ಅವರ ಸಾವಿಗೆ ಸಂತಾಪ ಸೂಚಿಸುತ್ತೆವೆ, ಅವರಿಗೆ ಯುಪಿಎ ಸರ್ಕಾರ 2013 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿತ್ತು ಎಂದು ಟ್ವೀಟ್ ಮಾಡಿತ್ತು. ಆದರೆ ಟ್ವಿಟರ್ ನಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಅದನ್ನು ತೆಗೆದು ಹಾಕಿದೆ.
ಕಾಂಗ್ರೆಸ್ ಸಂವೇದನೆ ಇಲ್ಲದೇ ನಡೆದುಕೊಳ್ಳುತ್ತಿದೆ, ಎಂದು ಆರೋಪಿಸಿರುವ ಟ್ವಿಟರ್ ಬಳಕೆದಾರರು, ಕಾಂಗ್ರೆಸ್ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಕೆಲವು ಮಂದಿ ಕಾಂಗ್ರೆಸ್ ನ ಕಾಲೆಳೆದಿದ್ದು ಶ್ರೀದೇವಿ ಅವರ ಸಾವಿಗೆ ಪ್ರಧಾನಿ ಮೋದಿ ಅವರನ್ನು ದೂರಬೇಡಿ ಎಂದು ಹೇಳಿದ್ದಾರೆ.