ಹೊಸದಿಲ್ಲಿ: ದಿಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಮೇಲೆ ಆಪ್ ಶಾಸಕರು ನಡೆಸಿದ ಹಲ್ಲೆ ಪ್ರಕರಣ ಇನ್ನೂ ಜೀವಂತ ಇರುವಾಗಲೇ ಆಮ್ ಆದ್ಮಿ ಪಕ್ಷದ ಶಾಸಕ ನರೇಶ್ ಬಲ್ಯಾನ್ ಅವರು, “ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರಂತಹ ಅಧಿಕಾರಿಗಳು ಹೊಡೆಸಿಕೊಳ್ಳುವುದಕ್ಕೆ ಯೋಗ್ಯರು’ ಎಂದು ಹೇಳುವ ಮೂಲಕ ಇನ್ನೊಂದು ವಿವಾದ ಸೃಷ್ಟಿಸಿದ್ದಾರೆ.
ಉತ್ತಮ್ ನಗರದಲ್ಲಿ ನಡೆದ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಆಪ್ ಶಾಸಕ ಬಲ್ಯಾನ್, “ದಿಲ್ಲಿ ಮುಖ್ಯ ಕಾರ್ಯದರ್ಶಿಗಳು ನಮ್ಮ ವಿರುದ್ಧ ಹಲ್ಲೆಯ ಸುಳ್ಳು ಆರೋಪ ಹೊರಿಸಿದ್ದಾರೆ; ನಾನು ಹೇಳುತ್ತೇನೆ ಜರ್ವಾಲ್ ಅವರಂತಹ ಅಧಿಕಾರಿಗಳಿಗೆ ಹೊಡೆಯುವುದೇ ಸರಿ; ಸಾಮಾನ್ಯ ಜನರಿಗೆ ಆಗಬೇಕಿರುವ ಕೆಲಸಗಳನ್ನು ತಡೆಯುವ ಅಧಿಕಾರಿಗೆ ಹೊಡೆಯಲೇ ಬೇಕಾಗುತ್ತದೆ’ ಎಂದು ಹೇಳಿದರು.
ಈ ನಡುವೆ ದಿಲ್ಲಿ ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ಅಮಾನತುಲ್ಲಾ ಖಾನ್ ಮತ್ತು ಪ್ರಕಾಶ್ ಜರ್ವಾಲ್ ಎಂಬ ಇಬ್ಬರು ಆಪ್ ಶಾಸಕರಿಗೆ ದಿಲ್ಲಿ ನ್ಯಾಯಾಲಯ ಬೇಲ್ ನಿರಾಕರಿಸಿದೆ.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಶೆಫಾಲಿ ಬರ್ನಾಲಾ ಟಂಡನ್ ಅವರು ಬಂಧಿತ ಆಪ್ ಶಾಸಕರಿಗೆ ಬೇಲ್ ನಿರಾಕರಿಸಿದರೂ, ಪೊಲೀಸ್ ಕಸ್ಟಡಿಯಲ್ಲಿ ಅವರನ್ನು ಪ್ರಶ್ನಿಸುವುದಕ್ಕೆ ಯಾವುದೇ ಹೊಸ ಕಾರಣಗಳು ಇಲ್ಲದಿರುವುದರಿಂದ ಅವರನ್ನು ಕಸ್ಟಡಿಗೆ ಒಪ್ಪಿಸಲು ನಿರಾಕರಿಸಿದರು.
ನ್ಯಾಯಾಲಯವು ಆಪ್ ಶಾಸಕರಿಬ್ಬರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
-ಉದಯವಾಣಿ