ಬಸ್ತಾರ್: ಮಗನ ಶವವನ್ನು ಹುಟ್ಟೂರಿಗೆ ಒಯ್ಯಲು ತಗಲುವ ಸಾರಿಗೆ ಖರ್ಚು ನಿಭಾಯಿಸಲು ಮತ್ತು ಶವದ ಅಂತ್ಯಕ್ರಿಯೆ ನಡೆಸಲು ತನ್ನ ಬಳಿ ಸಾಕಷ್ಟು ಹಣ ಇಲ್ಲದ ಕಾರಣಕ್ಕೆ ಮಹಿಳೆಯೊಬ್ಬಳು ಮಗನ ಶವವನ್ನು ಜಗದಾಳಪುರದ ಮೆಡಿಕಲ್‌ಕಾಲೇಜಿಗೆ ದಾನವಾಗಿ ನೀಡಿರುವ ಘಟನೆ ವರದಿಯಾಗಿದೆ.
ಈ ಸ್ಥಿತಿಯಲ್ಲಿ ನಮಗೆ ನೆರವಾಗಲು ಕುಟುಂಬದ ಯಾರೊಬ್ಬರೂ ಮುಂದೆ ಬರಲಿಲ್ಲ ಎಂದು ಮೃತ ವ್ಯಕ್ತಿಯ ಅತ್ತಿಗೆ ದುಃಖದಿಂದ ಹೇಳಿದ್ದಾಳೆ.
“ನಾವು ತುಂಬ ಬಡವರು. ಶವವನ್ನು ಊರಿಗೆ ಒಯ್ಯಲು ಮತ್ತು ಅಲ್ಲಿ ಶವ ಸಂಸ್ಕಾರ ನಡೆಸಲು ನಮ್ಮ ಬಳಿ ಹಣ ಇಲ್ಲ. ಯಾರೋ ಕೆಲವರು ಇಲ್ಲಿ ಹೇಳಿದರು, ನೀವು ಶವವನ್ನು ಆಸ್ಪತ್ರೆಗೆ ದಾನವಾಗಿ ನೀಡಿ ಎಂದು. ನಾವು ಬೇರೆ ಉಪಾಯವಿಲ್ಲದೆ ಹಾಗೆಯೇ ಮಾಡಿದೆವು’ ಎಂದು ಮೃತ ವ್ಯಕ್ತಿಯ ತಾಯಿ ಹೇಳಿದರು.
ಮೃತ ವ್ಯಕ್ತಿಯನ್ನು ಬಾಮನ್‌ಎಂದು ಗುರುತಿಸಲಾಗಿದೆ. ಕಳೆದ ಫೆ.12ರಂದು ಯಾವುದೋ ಅಪರಿಚಿತ ವಾಹನ ಆತನಿಗೆ ಢಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತ ಫೆ.15ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.