ರಾಷ್ಟ್ರೀಯ

ಗಡಿ ದಾಳಿಗೆ ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರ ಬಳಸುತ್ತಿರುವ ಪಾಕ್

Pinterest LinkedIn Tumblr


ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯುದ್ದಕ್ಕೂ ಭಾರತೀಯ ಯೋಧರ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಅಮೆರಿಕ ನಿರ್ಮಿತ ಆ್ಯಂಟಿ ಟ್ಯಾಂಕ್‌ ಗೈಡೆಡ್‌ ಕ್ಷಿಪಣಿಗಳನ್ನು (ಎಟಿಜಿಎಂ) ಬಳಸುತ್ತಿರುವ ಬಗ್ಗೆ ಭಾರತವು ಟ್ರಂಪ್‌ ಆಡಳಿತದ ಜತೆ ಪ್ರಸ್ತಾಪಿಸಲಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಕಳೆದ ಭಾನುವಾರ ರಜೌರಿ ಜಿಲ್ಲೆಯ ನಿಯಂತ್ರಣ ರೇಖೆಯುದ್ದಕ್ಕೂ ಭಾರತೀಯ ಸೇನೆಯ ಮೇಲೆ ಪಾಕ್‌ ಸೇನೆ ಎಟಿಜಿಎಂ ಬಳಸಿ ದಾಳಿ ನಡೆಸಿತ್ತು. ಆಗ ನಾಲ್ವರು ಭಾರತೀಯ ಯೋಧರು ಹುತಾತ್ಮರಾಗಿದ್ದರು.

ರಜೌರಿ ದಾಳಿಯಲ್ಲಿ ಪಾಕ್ ಸೇನೆ ತಾನು ಯಾವತ್ತೂ ಬಳಸುವ 80 ಎಂಎಂ ಮೋರ್ಟ್‌ರಗಳ ಜತೆಗೆ, 120 ಎಂಎಂ ಮೋರ್ಟರ್‌ಗಳು ಮತ್ತು ಎಟಿಜಿಎಂಗಳನ್ನೂ ಬಳಸಿದೆ ಎಂದು ಸೇನಾ ಮೂಲಗಳು ಹೇಳಿವೆ.

ಭಾರತ ಅಮೆರಿಕ ರಕ್ಷಣಾ ಬಾಂಧವ್ಯಗಳು ವರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನವು ಅಮೆರಿಕ ನಿರ್ಮಿತ ಎಟಿಜಿಎಂಗಳನ್ನೇ ಬಳಸಿ ದಾಳಿ ನಡೆಸುತ್ತಿದೆ ಎಂಬ ಮಾಹಿತಿ ಭದ್ರತಾ ಪಡೆಗಳಿಗೆ ದೊರೆತಿದೆ.

ಈ ವಿಚಾರವನ್ನು ಅಮೆರಿಕದ ಜತೆ ಪ್ರಸ್ತಾಪಿಸಲಿದ್ದೇವೆ ಎಂದು ಮೂಲವೊಂದು ಹೇಳಿದೆ.

Comments are closed.