ರಾಷ್ಟ್ರೀಯ

ಮುಂದಿನ ಬಜೆಟ್ ಅಭಿವೃದ್ಧಿ ಪರ; ಚುನಾವಣೆಗಾಗಿ ಬಜೆಟ್‌ ಮಂಡಿಸುವ ಇರಾದೆ ನನಗಿಲ್ಲ: ಪ್ರಧಾನಿ ಮೋದಿ

Pinterest LinkedIn Tumblr

ನವದೆಹಲಿ: ಮುಂದಿನ ಬಜೆಟ್ ಜನಪ್ರಿಯವಾಗಿರುವುದಿಲ್ಲ..ಬದಲಿಗೆ ಅಭಿವೃದ್ಧಿ ಪರವಾಗಿರಲಿದೆ ಎಂದು ಪ್ರಧಾನಿ ಮೋದಿ ಭಾನುವಾರ ಹೇಳಿದ್ದಾರೆ.

ಸುದ್ದಿವಾಹಿನಿಯೊಂದಿಗೆ ಸಂದರ್ಶನದಲ್ಲಿ ಮಾತನಾಡುತ್ತಾ ಈ ಬಗ್ಗೆ ಸುಳಿವು ನೀಡಿರುವ ಪ್ರಧಾನಿ ಮೋದಿ, “ಯಾವುದೇ ಸಂದರ್ಭದಲ್ಲಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನನ್ನ ಟೈಮ್‌ಟೇಬಲ್‌ ಅಥವಾ ಕಾರ್ಯಕ್ರಮ, ಯೋಜನೆಗಳನ್ನು ಮಾಡುವುದಿಲ್ಲ. ದೇಶದ ಜನರಿಗೆ ಏನು ಬೇಕೋ, ಅವರ ಆಶಯಗಳನ್ನು ಪೂರೈಸುವ ಆಧಾರದ ಮೇಲೆ ಯೋಜನೆ ರೂಪಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ ಕೇವಲ 18 ತಿಂಗಳು ಮಾತ್ರ ಬಾಕಿ ಇದ್ದು, ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಯೋಜನೆಗಳನ್ನು ರೂಪಿಸುವುದಿಲ್ಲ. ಜನರ ಆಶೋತ್ತರಗಳಿಗೆ ಪೂರಕವಾಗಿ ಯೋಜನೆ ರೂಪಿಸಬೇಕು ಎಂದು ಹೇಳಿದರು, ಅಂತೆಯೇ ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಬಜೆಟ್‌ ಮಂಡಿಸುವುದನ್ನು ನಾನು ಒಪ್ಪುವುದಿಲ್ಲ. ಜನರಿಗೆ ಬೇಕಾದ ಬಜೆಟ್‌ ರೂಪಿಸುವುದೇ ನಮ್ಮ ಧ್ಯೇಯ ಎಂದು ಮೋದಿ ಹೇಳಿದ್ದಾರೆ.

“125 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ಈಗ ಯುವ ರಾಷ್ಟ್ರ. ಏಕೆಂದರೆ 30 ರಿಂದ 40 ವರ್ಷದೊಳಗಿನವರ ಸಂಖ್ಯೆ 80 ಕೋಟಿ ಮಂದಿ ಇದ್ದಾರೆ. ಈ ಯುವ ಭಾರತವನ್ನು ವಿಶ್ವದ ಮುಂದೆ ಭವ್ಯವಾಗಿ ಪ್ರದರ್ಶಿಸುವುದೇ ನಮ್ಮ ಧ್ಯೇಯ. ಈಗಾಗಲೇ ಇದರಲ್ಲಿ ಕೆಲವು ಹೆಜ್ಜೆಗಳನ್ನು ಇಟ್ಟಿದ್ದೇವೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಈಗ ಭಾರತದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ ನನಗೆ ಜನರು ನೀಡುವ ಸರ್ಟಿಫಿಕೇಟ್‌ ಮುಖ್ಯ ಎಂದು ಮೋದಿ ತಿಳಿಸಿದರು.

ಇದೇ ವೇಳೆ ನೋಟು ನಿಷೇಧವನ್ನು ಯಶಸ್ವೀ ನಿರ್ಧಾರ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಜಿಎಸ್ ಟಿ ದೂರಗಾಮಿ ಲಾಭವಿದೆ ಎಂದು ಹೇಳಿದರು.

Comments are closed.