ರಾಷ್ಟ್ರೀಯ

‘ಭಾರತದ ಬಿನ್ ಲಾಡೆನ್’ ಕುಖ್ಯಾತಿಯ ಉಗ್ರ ಅಬ್ದುಲ್ ಸುಭಾನ್ ಖುರೇಷಿ ಬಂಧನ!

Pinterest LinkedIn Tumblr

ನವದೆಹಲಿ: ಭಾರತ ಬಿನ್ ಲಾಡೆನ್ ಎಂದು ಕುಖ್ಯಾತಿ ಪಡೆದಿದ್ದ ಸಿಮಿ ಮತ್ತು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರ ಮುಖಂಡ ಅಬ್ದುಲ್ ಸುಭಾನ್ ಖುರೇಷಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಸುಮಾರು ಒಂದು ದಶಕದ ಬಳಿಕ ಗುಜರಾತ್ ಸರಣಿ ಬಾಂಬ್ ಸ್ಫೋಟದ ರೂವಾರಿ ಅಬ್ದುಲ್ ಸುಭಾನ್ ಖುರೇಷಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಗುಜರಾತ್ ಎಟಿಎಸ್ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಖುರೇಷಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಖುರೇಷಿ ಅಲಿಯಾಸ್ ತೌಖೀರ್ ವಿವಿಧ ಪ್ರಕರಣಗಳಲ್ಲಿ ರಾಷ್ಟ್ರೀಯ ತನಿಖಾ ದಳ ಎನ್ ಐಎಗೆ ಕೂಡ ಬೇಕಾದ ವ್ಯಕ್ತಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೋಸ್ಟ್ ವಾಂಟೆಡ್ ಆಗಿರುವ ಮತ್ತು ದಶಕಗಳಿಂದ ಗುಜರಾತ್ ಪೊಲೀಸ್ ಮತ್ತು ಎಟಿಎಸ್ ಅಧಿಕಾರಿಗಳಿಗೆ ಬೇಕಿರುವ ಉಗ್ರ ಅಬ್ದುಲ್ ಸುಭಾನ್ ಖುರೇಷಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 2008ರ ಜುಲೈ 26ರಂದು ಗುಜರಾತ್ ನ ಅಹ್ಮದಾಬಾದ್ ನಲ್ಲಿ ಬರೊಬ್ಬರಿ 21 ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ವೇಳೆ ಮೊಟ್ಟ ಮೊದಲ ಬಾರಿಗೆ ತನಿಖಾಧಿಕಾರಿಗಳಿಂದ ಉಗ್ರ ಅಬ್ದುಲ್ ಸುಭಾನ್ ಖುರೇಷಿಯ ಹೆಸರು ಉಲ್ಲೇಖವಾಗಿತ್ತು. ಇದಕ್ಕೂ ಮೊದಲು 2006ರಲ್ಲಿ ನಡೆದಿದ್ದ ಮುಂಬೈ ಲೋಕಲ್ ರೈಲು ಬಾಂಬ್ ಸ್ಫೋಟ ಪ್ರಕರಣದಲ್ಲೂ ಖುರೇಷಿ ಕೈವಾಡದ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.

ಇನ್ನು ಅಹ್ಮದಾಬಾದ್ ಸರಣಿ ಬಾಂಬ್ ಸ್ಫೋಟದ ವೇಳೆ ಸ್ಫೋಟದ ಜವಾಬ್ದಾರಿ ಹೊತ್ತು ರವಾನೆಯಾಗಿದ್ದ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸಂಬಂಧಿಸಿದ ಅಲ್-ಅರಬಿ ಇ-ಮೇಲ್ ಖಾತೆಗೂ ಬಂಧಿತ ಖುರೇಷಿಗೂ ಸಂಬಂಧವಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 2006ರಲ್ಲಿ ದೆಹಲಿ, ಬೆಂಗಳೂರು ಮತ್ತು ಮುಂಬೈನಲ್ಲಿ ನಡೆದಿದ್ದ ವಿವಿಧ ಬಾಂಬ್ ಸ್ಫೋಟ ಪ್ರಕರಣಗಳಲ್ಲೂ ಖುರೇಷಿ ಹೆಸರು ತಳುಕು ಹಾಕಿಕೊಂಡಿತ್ತು.

ಭಾರತದ ಬಿನ್ ಲಾಡೆನ್ ಎಂದೇ ಕುಖ್ಯಾತಿಗಳಿಸಿದ್ದ ಖುರೇಷಿ, ನಾಪತ್ತೆ ಮತ್ತು ವೇಷಬದಲಿಸಿಕೊಂಡು ತಿರುಗಾಡುತ್ತಿದ್ದರಲ್ಲಿ ನಿಸ್ಸೀಮನಾಗಿದ್ದನಂತೆ. ಇದೇ ಕಾರಣಕ್ಕೆ ಈತ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಚಳ್ಳೇ ಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ. ಅಲ್ಲದೆ ಬಾಂಬ್ ತಯಾರಿಕೆಯಲ್ಲೂ ನಿಪುಣನಾಗಿದ್ದ ಖುರೇಷಿ, ಈ ಹಿಂದೆ ಬೆಂಗಳೂರು ಮತ್ತು ಹೈದರಾಬಾದ್ ನ ಪ್ರತಿಷ್ಟಿತ ಐಟಿ ಕಂಪನೆಯಲ್ಲೂ ಕೆಲಸ ಮಾಡಿದ್ದನಂತೆ. 1998ರಲ್ಲಿ ಈತ ನಿಷೇಧಿತ ಉಗ್ರ ಸಂಘಟನೆ ಸಿಮಿ ಸೇರಿದ್ದ ಬಳಿಕ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Comments are closed.