
ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಗ್ರಾದ ಸರ್ಕ್ಯೂಟ್ ಹೌಸ್ ನಲ್ಲಿ ರಾತ್ರಿ ಕಳೆಯುವ ಮೂಲಕ ಸುಮಾರು 16 ವರ್ಷಗಳ ಸಂಪ್ರದಾಯವನ್ನು ಮುರಿದಿದ್ದಾರಂತೆ!
ಹೌದು ಕಳೆದ 16 ವರ್ಷಗಳಿಂದ ಯಾವುದೇ ರಾಜ್ಯದ ಮುಖ್ಯಮಂತ್ರಿಗಳು ಆಗ್ರಾದ ಸರ್ಕ್ಯೂಟ್ ಹೌಸ್ ನಲ್ಲಿ ಮಲಗುವ ಸಾಹಸಕ್ಕೆ ಕೈಹಾಕಿಲ್ಲ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಅಧಿಕಾರ ಕಳೆದುಕೊಳ್ಳುವ ಭಯ!
ಕರ್ನಾಟಕದ ಚಾಮರಾಜನಗರಕ್ಕೆ ಮುಖ್ಯಮಂತ್ರಿಯಾದವರು ಭೇಟಿ ನೀಡಿದರೆ ಆರು ತಿಂಗಳೊಳಗೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ನಂಬಿಕೆ ಇತ್ತು, ಸಿಎಂ ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ ಹಲವು ಬಾರಿ ಭೇಟಿ ನೀಡುವ ಮೂಲಕ ಸಂಪ್ರದಾಯ ಮುರಿದಿದ್ದರು.
ಅದೇ ರೀತಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆಗ್ರಾ ಸರ್ಕ್ಯೂಟ್ ಹೌಸ್ ನಲ್ಲಿ ರಾತ್ರಿ ಕಳೆದಿದ್ದಾರೆ. ಈ ಸರ್ಕ್ಯೂಟ್ ಹೌಸ್ ನಲ್ಲಿ ಸುಮಾರು 16 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ರಾಜನಾಥ್ ಸಿಂಗ್ ಅವರು ತಂಗಿದ್ದ ಕೊನೆಯ ಸಿಎಂ.
ಹೀಗೆ ಸರ್ಕ್ಯೂಟ್ ಹೌಸ್ ನಲ್ಲಿ ತಂಗಿದ್ದ ರಾಜನಾಥ್ ಸಿಂಗ್ ಅವರು ನಂತರ ಸಿಎಂ ಗದ್ದುಗೆಯಿಂದ ಕೆಳಗಿಳಿದಿದ್ದರು. ಅದಾದ ನಂತರ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಆಗಲಿ, ಮಾಯಾವತಿ, ಅಖಿಲೇಶ್ ಯಾದವ್ ಕೂಡಾ ಸರ್ಕ್ಯೂಟ್ ಹೌಸ್ ನಲ್ಲಿ ತಂಗುವ ಧೈರ್ಯ ತೋರಿಲ್ಲ ಎಂದು ವರದಿ ವಿವರಿಸಿದೆ.
ಭಾರತದ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದಂಪತಿಯನ್ನು ಆಗ್ರಾದಲ್ಲಿ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಸಿಎಂ ಯೋಗಿ ಅವರು ಆಗ್ರಾ ಸರ್ಕ್ಯೂಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದರು.
-ಉದಯವಾಣಿ
Comments are closed.