ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ಹನುಮಾನ್ ಮಂದಿರ ಭೇಟಿಯೊಂದಿಗೆ ಯಾತ್ರೆ: ಮುಂದುವರಿದ ರಾಹುಲ್ ಟೆಂಪಲ್‌ ರನ್

Pinterest LinkedIn Tumblr


ರಾಯ್‌ಬರೇಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಚುಕ್ಕಾಣಿಯನ್ನು ಅಧಿಕೃತವಾಗಿ ಹಿಡಿದ ಬಳಿಕ ಮೊದಲ ಬಾರಿಗೆ ಎರಡು ದಿನಗಳ ಪ್ರವಾಸ ಹೊರಟಿದ್ದಾರೆ. ಲಖನೌದಿಂದ ಅಮೇಥಿ ಮಾರ್ಗವಾಗಿ ಹೊರಟ ಅವರು ಹನುಮಾನ್‌ ಮಂದಿರಕ್ಕೆ ಭೇಟಿ ನೀಡಿದರು.

ಲಖನೌ-ರಾಯ್‌ಬರೇಲಿ ಹೆದ್ದಾರಿಯಲ್ಲಿ ಚುರ್ವ ಹನುಮಾನ್‌ ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ರಾಹುಲ್‌ ಅವರು ಲಖನೌಗೆ ಆಗಮಿಸಿದ ಕೂಡಲೇ ಅವರನ್ನು ಮುತ್ತಿಕೊಂಡ ಅಭಿಮಾನಿಗಳು ಹಾರ-ತುರಾಯಿಗಳನ್ನು ತೊಡಿಸಿ ಸಂಭ್ರಮಿಸಿದರು.

‘ಕಾಂಗ್ರೆಸ್‌ ಅಧ್ಯಕ್ಷರು ತಮ್ಮ ಲೋಕಸಭಾ ಕ್ಷೇತ್ರ ಅಮೇಥಿಗೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ. ಆದರೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರವಾಸ ಆರಂಭಿಸಿದ್ದು ಇದೇ ಮೊದಲು ಇರಬಹುದು’ ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತ ರಾಮ್‌ ಕುಮಾರ್ ತಿಳಿಸಿದರು.

ಬಿಳಿಯ ಕುರ್ತಾ-ಪೈಜಾಮಾ ಧರಿಸಿದ್ದ ರಾಹುಲ್, ಹಣೆಗೆ ದೊಡ್ಡದಾದ ಕುಂಕುಮ ತಿಲಕ ಧರಿಸಿದ್ದರು.

ಇಂದು ಮಕರ ಸಂಕ್ರಾಂತಿ. ತಮ್ಮ ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್‌ಬರೇಲಿ ಕ್ಷೇತ್ರಕ್ಕೆ ತೆರಳಲು ಹಬ್ಬದ ದಿನವನ್ನೇ ಆರಿಸಿಕೊಂಡಿರುವುದು ವಿಶೇಷವಾಗಿದೆ. ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಕಟ್ಟರ್‌ ಹಿಂದುತ್ವವಾದದ ವಿರುದ್ಧ ಕಾಂಗ್ರೆಸ್‌ನ ‘ಮೃದು ಹಿಂದುತ್ವ ನೀತಿ’ ಎಂದು ಪಕ್ಷದ ಆಂತರಿಕ ಮೂಲಗಳು ಅಭಿಪ್ರಾಯ ಪಡುತ್ತಿವೆ.

ರಾಹುಲ್‌ ಸುಮಾರು 10 ನಿಮಿಷಗಳ ಕಾಲ ಮಂದಿರದಲ್ಲಿದ್ದರು. ಕಳೆದ ಬಾರಿ ಅವರು, 2016ರ ಸೆಪ್ಟೆಂಬರ್‌ 9ರಂದು ಅಯೋಧ್ಯೆಯ ಹನುಮಾನ್‌ ಘರಿ ಮಂದಿರಕ್ಕೆ ಭೇಟಿ ನೀಡಿದ್ದರು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ಈ ಮಂದಿರಕ್ಕೆ ಭೇಟಿ ನೀಡಿದ್ದ ನೆಹರೂ ಮನೆತನದ ಮೊದಲ ನಾಯಕ ರಾಹುಲ್ ಆಗಿದ್ದರು.
ಹನುಮಾನ್‌ ಘರಿ ಮಂದಿರ ರಾಮಜನ್ಮಭೂಮಿಯಿಂದ ಕೇವಲ 1 ಕಿ.ಮೀ ದೂರದಲ್ಲಿದೆ.

ಇತ್ತೀಚಿನ ಗುಜರಾತ್ ಚುನಾವಣೆ ವೇಳೆ ಸುಮಾರು 20 ಮಂದಿರಗಳಿಗೆ ರಾಹುಲ್‌ ಭೇಟಿ ನೀಡಿದ್ದರು. ಬಿಜೆಪಿಯ ಹಿಂದುತ್ವ ರಾಜಕೀಯವನ್ನು ಎದುರಿಸಲು ರಾಹುಲ್‌ ಉದ್ದೇಶಪೂರ್ವಕವಾಗಿ ಈ ತಂತ್ರದ ಮೊರೆ ಹೋಗಿದ್ದರು. ಗುಜರಾತ್ ಫಲಿತಾಂಶ ಬಂದ ಬಳಿಕ ರಾಹುಲ್ ಸೋಮನಾಥ ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು. ತಾವೊಬ್ಬ ಶಿವಭಕ್ತ, ಜನಿವಾರಧಾರಿ ಬ್ರಾಹ್ಮಣ ಎಂದೆಲ್ಲ ರಾಹುಲ್ ಹೇಳಿಕೊಂಡಿದ್ದರು.

Comments are closed.