ರಾಷ್ಟ್ರೀಯ

ಹಿಂದಿಯೇತರ ಭಾಷೆ ಬಲ್ಲೆ: ಕನ್ನಡದಲ್ಲಿ ಮಾತನಾಡಿರುವ ವೀಡಿಯೊ ಸಹಿತ ಸಚಿವೆ ಸುಷ್ಮಾ ಟ್ವೀಟ್‌

Pinterest LinkedIn Tumblr


ಹೊಸದಿಲ್ಲಿ: ಹಿಂದಿಯೇತರ ಭಾರತೀಯ ಭಾಷೆಗಳ ಬಗ್ಗೆಯೂ ನನಗೆ ಹೆಮ್ಮೆಯಿದ್ದು, ಕೆಲವು ಭಾಷೆಗಳನ್ನು ಸುಲಲಿತವಾಗಿ ಮಾತನಾಡುತ್ತೇನೆ ಎಂದು ಸಮರ್ಥಿಸಿಕೊಂಡು ಕನ್ನಡದಲ್ಲಿ ಮಾತನಾಡಿರುವ ವೀಡಿಯೊ ಸಮೇತ ಸುಷ್ಮಾ ಟ್ವೀಟ್‌ ಮಾಡಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಘೋಷಿಸುವ ವಿಚಾರದಲ್ಲಿ ಲೋಕಸಭೆಯಲ್ಲಿ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಶಶಿ ತರೂರ್ ನಡುವೆ ವಾಗ್ವಾದ ನಡೆದಿತ್ತು. ವಿಶ್ವಸಂಸ್ಥೆಯಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ಅಗತ್ಯವೇನು ಎಂದು ತರೂರ್‌ ಪ್ರಶ್ನಿಸಿದ್ದರು.

ವಿಶ್ವಸಂಸ್ಥೆಯಲ್ಲಿ ಹಿಂದಿ ಏಕೆ ಅಧಿಕೃತ ಭಾಷೆಯಾಗಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಕೆಲವು ಅಗತ್ಯ ಪ್ರಕ್ರಿಯೆಗಳು ನಡೆಯಬೇಕಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಸುಷ್ಮಾ ಲೋಕಭೆಯಲ್ಲಿ ಹೇಳಿದ್ದರು.

ಹಿಂದಿಯನ್ನು ವಿಶ್ವಸಂಸ್ಥೆಯಲ್ಲಿ ಅಧಿಕೃತ ಭಾಷೆಯನ್ನಾಗಿ ಮಾಡಬೇಕಾದರೆ 193 ರಾಷ್ಟ್ರಗಳಲ್ಲಿ 129 ರಾಷ್ಟ್ರಗಳು ಅದರ ಪರವಾಗಿ ಮತ ಚಲಾಯಿಸಿ ಪ್ರಕ್ರಿಯೆಗೆ ತಗುಲುವ ವೆಚ್ಚ ಭರಿಸಬೇಕಾಗುತ್ತದೆ. ಆರ್ಥಿಕ ಸಂಕಷ್ಟದಲ್ಲಿರುವ ರಾಷ್ಟ್ರಗಳಿಗೆ ಇದು ಹೊರೆಯಾಗುತ್ತದೆ ಎಂದು ಅವರು ವಿವರಣೆ ನೀಡಿದ್ದರು.

ಆಗ ರಾಷ್ಟ್ರ ಭಾಷೆಯೂ ಅಲ್ಲದ ಹಿಂದಿಯನ್ನು ವಿಶ್ವಸಂಸ್ಥೆಯಲ್ಲಿ ಅಧಿಕೃತವೆಂದು ಘೋಷಿಸುವಂತೆ ಮಾಡುವುದರ ಅಗತ್ಯವೇನು ಎಂದು ತರೂರ್‌ ಕೇಳಿದ್ದರು. ಹಿಂದಿಯನ್ನು ಕೇವಲ ನಮ್ಮ ರಾಷ್ಟ್ರ ಮಾತ್ರ ಅಧಿಕೃತ ಭಾಷೆಯಾಗಿ ಬಳಕೆ ಮಾಡುತ್ತಿದೆ. ಹೀಗಿರುವಾಗ ಹಿಂದಿಯನ್ನು ಅಧಿಕೃತ ಭಾಷೆಯೆಂದು ಘೋಷಿಸುವ ಪ್ರಯತ್ನವೇಕೆ ಎಂದು ಪ್ರಶ್ನಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಹಿಂದಿ ಅಧಿಕೃತ ಭಾಷೆಯಾದರೆ ತಮಿಳುನಾಡಿನವರು ಇಲ್ಲವೇ ಪಶ್ಚಿಮ ಬಂಗಾಳದವರು ಪ್ರಧಾನಿಗಳಾದಾಗ ಏನು ಮಾಡಬೇಕು ಎಂದೂ ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್‌ ಮಾಡಿರುವ ಸುಷ್ಮಾ , ಎಲ್ಲಾ ಭಾರತೀಯ ಭಾಷೆಗಳ ಬಗ್ಗೆ ನನಗೆ ಹೆಮ್ಮ ಇದೆ. ಕೆಲವನ್ನು ನಾನು ಸುಲಲಿತವಾಗಿ ಮಾತನಾಡುತ್ತೇನೆ ಎಂದು ಹೇಳಿ, 1999ರಲ್ಲಿ ಬಳ್ಳಾರಿಯಲ್ಲಿ ಕನ್ನಡ ಮಾತನಾಡಿದ್ದ ವೀಡಿಯೊ ಕ್ಲಿಪ್‌ ಕೂಡ ನೀಡಿದ್ದಾರೆ.

Comments are closed.