
ಅಹಮದಾಬಾದ್: ಗುಜರಾತ್‌ನಲ್ಲಿ ಹೊಸ ಸರಕಾರ ಅಧಿಕಾರ ವಹಿಸಿಕೊಂಡ ದಿನದಿಂದಲೂ ರಾಜಕೀಯ ನಾಟಕಗಳು ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿವೆ.
ತಮ್ಮಿಂದ ಪ್ರಮುಖ ಖಾತೆಗಳನ್ನು ಕಿತ್ತುಕೊಂಡು ಕಡೆಗಣಿಸಲಾಗಿದೆ ಎಂದು ಮುನಿಸಿಕೊಂಡಿರುವ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರನ್ನು ತಮ್ಮ ಜತೆ ಕೈಜೋಡಿಸುವಂತೆ ಪಾಟಿದಾರ್ ಅನಾಮತ್ ಆಂದೋಲನ್ ಸಮಿತಿ (ಪಿಎಎಎಸ್) ಸಂಚಾಲಕ ಹಾರ್ದಿಕ್ ಪಟೇಲ್ ಆಹ್ವಾನಿಸಿದ್ದಾರೆ.
‘ಬಿಜೆಪಿ ತನ್ನ ಹಿರಿಯ ನಾಯಕನಿಗೆ ಸೂಕ್ತ ಗೌರವ ನೀಡುತ್ತಿಲ್ಲ. ಈ ಹೊತ್ತಿನಲ್ಲಿ ನಾವೆಲ್ಲರೂ ಅವರ ಪರ ನಿಲ್ಲಬೇಕಾಗಿದೆ’ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಹಣಕಾಸು, ನಗರಾಭಿವೃದ್ಧಿ ಮತ್ತು ಪೆಟ್ರೋಲಿಯಂ ಖಾತೆಗಳನ್ನು ತಮ್ಮಿಂದ ಕಿತ್ತುಕೊಳ್ಳಲಾಗಿದೆ ಎಂದು ಅತೃಪ್ತರಾಗಿರುವ ನಿತಿನ್ ಪಟೇಲ್, ತಮ್ಮ ಕಚೇರಿಗೆ ಹಾಜರಾಗಿ ಅಧಿಕಾರ ಸ್ವೀಕರಿಸಿಲ್ಲ.
‘ಬಿಜೆಪಿ ಸೂಕ್ತ ಗೌರವ ನೀಡುತ್ತಿಲ್ಲ ಎಂದಾದರೆ ನಿತಿನ್ ಪಟೇಲ್ ನಮ್ಮ ಜತೆ ಸೇರಿಕೊಳ್ಳಬಹುದು. ಅವರು ಪಕ್ಷಕ್ಕಾಗಿ ಕಠಿಣ ಶ್ರಮ ಪಟ್ಟಿದ್ದಾರೆ’ ಎಂದು ಹಾರ್ದಿಕ್ ಮಾಧ್ಯಮಗಳ ಜತೆ ಶನಿವಾರ ಮಾತನಾಡುತ್ತ ಪ್ರತಿಕ್ರಿಯಿಸಿದರು.
ಚುನಾವಣೆ ಫಲಿತಾಂಶಗಳ ಕುರಿತು ಪರಾಮರ್ಶೆ ನಡೆಸಲು ‘ಪಾಸ್’ ಆಯೋಜಿಸಿದ್ದ ಚಿಂತನ ಶಿಬಿರದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
‘ನಿತಿನ್ ಪಟೇಲ್ ಬಿಜೆಪಿ ಬಿಟ್ಟು ಬರುವುದಾದರೆ ಅವರ ಜತೆ 10 ಶಾಸಕರೂ ಪಕ್ಷ ಬಿಟ್ಟು ಬರಲು ಸಿದ್ಧವಾಗಿದ್ದಾರೆ. ಆಗ ನಾವು ಅವರನ್ನು ಬೆಂಬಲಿಸುತ್ತೇವೆ. ಅವರನ್ನು ಸ್ವಾಗತಿಸುವಂತೆ ಕಾಂಗ್ರೆಸ್ ಮುಖಂಡರ ಜತೆ ಮಾತನಾಡುತ್ತೇನೆ. ಅವರಿಗೆ ಸೂಕ್ತ ಹುದ್ದೆ ನೀಡಲಾಗುವುದು’ ಎಂದು ಹಾರ್ದಿಕ್ ಹೇಳಿಕೊಂಡರು.
ಈ ನಡುವೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭರತ್ ಸಿನ್ಹ ಸೋಳಂಕಿ, ‘ಪರಿಸ್ಥಿತಿಯನ್ನು ಕಾಂಗ್ರೆಸ್ ನಿಕಟವಾಗಿ ಅವಲೋಕಿಸುತ್ತಿದೆ. ಆನಂದಿ ಬೆನ್ ಪಟೇಲ್ ನಂತರ ಇದೀಗ ನಿತಿನ್ ಪಟೇಲ್ ಬಿಜೆಪಿ ನಾಯಕರ ಟಾರ್ಗೆಟ್ ಆಗಿದ್ದಾರೆ. ಗುಜರಾತ್‌ನ ಹಿತಕ್ಕಾಗಿ ನಿತಿನ್ ಭಾಯ್ ಪಟೇಲ್ ಮತ್ತು ಕೆಲವು ಬಿಜೆಪಿ ಶಾಸಕರ ಬೆಂಬಲ ದೊರೆತರೆ ನಾವು ಸರಕಾರ ರಚಿಸಬಹುದು’ ಎಂದು ಪ್ರತಿಪಾದಿಸಿದರು.
ಮಾಹಿತಿ ಮೂಲ: iamgujarat.com
Comments are closed.