
ನವದೆಹಲಿ: ಲೋಕಸಭೆಯಲ್ಲಿ ಅನುಮೋದನೆ ಪಡೆದ ತ್ರಿವಳಿ ತಲಾಖ್ ಮಸೂದೆಗೆ ಬೆಂಬಲ ನೀಡಲು ತಾನು ಸಿದ್ಧ.. ಆದರೆ ಕೆಲ ಷರತ್ತುಗಳಿವೆ ಎಂದು ಕಾಂಗ್ರೆಸ್ ರಾಜ್ಯಸಭೆಯಲ್ಲಿ ಹೇಳಿದೆ.
ತ್ರಿವಳಿ ತಲಾಖ್ ಮಸೂದೆಗೆ ಅನುಮೋದನೆ ನೀಡುವ ಸಂಬಂಧ ಸಂಸತ್ ನ ರಾಜ್ಯ ಸಭೆ ಕಲಾಪದಲ್ಲಿ ಇಂದೂ ಕಾವೇರಿದ ಚರ್ಚೆ ನಡೆಯುತ್ತಿದ್ದು, ಕೇಂದ್ರ ಸರ್ಕಾರ ಮಂಡಿಸಿರುವ ತ್ರಿವಳಿ ತಲಾಖ್ ಮಸೂದೆಯಲ್ಲಿ ಹಲವು ತಾಂತ್ರಿಕ ಲೋಪದೋಷಗಳಿವೆ. ಅವುಗಳನ್ನು ಬಗೆಹರಿಸಿದರೆ ತಾನು ಮಸೂದೆಯನ್ನು ಬೆಂಬಲಿಸಲು ಸಿದ್ಧ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಸ್ತುತ ಕೇಂದ್ರ ಸರ್ಕಾರ ಮಂಡಿಸಿರುವ ತ್ರಿವಳಿ ತಲಾಖ್ ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಗೆ ರವಾನಿಸಬೇಕು. ಸಮಿತಿಯು ಮಸೂದೆಯ ಆಗು-ಹೋಗುಗಳನ್ನು ಪರಿಶೀಲಿಸಿ ವರದಿ ನೀಡಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂತೆಯೇ ತ್ರಿವಳಿ ತಲಾಖ್ ನೂರಾರು ವರ್ಷಗಳಿಂದ ಜಾರಿಯಲ್ಲಿರುವ ಪದ್ಧತಿಯಾಗಿದ್ದು, ಇದರ ಹಠಾತ್ ನಿಷೇಧ ಸರಿಯಲ್ಲ. ಹೀಗಾಗಿ ಕಾಲಾನು ಕ್ರಮದಲ್ಲಿ ಮಸೂದೆಯ ಆಗುಹೋಗುಗಳನ್ನು ಪರಿಶೀಲಿಸಿದ ಬಳಿಕ ತ್ರಿವಳಿ ತಲಾಖ್ ಜಾರಿ ಮಾಡಬೇಕು ಎಂದು ಹೇಳಿದೆ. ಅಂತೆಯೇ ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾಗಿರುವ ಕುರಿತೂ ಕಾಂಗ್ರೆಸ್ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದು, ಲೋಕಸಭೆಯಲ್ಲಿ ಬಿಜೆಪಿಯ ಮತ್ತು ಬಿಜೆಪಿ ಬೆಂಬಲಿತ ಸದಸ್ಯರೇ ಹೆಚ್ಚಾಗಿದ್ದು, ಸರ್ಕಾರದ ಮಸೂದೆಗೆ ಅನುಮೋದನೆ ನೀಡಿದ್ದಾರೆ ಎಂದು ಹೇಳಿದೆ.
10 ವರ್ಷ ಜೈಲು ತೀರಾ ಜಾಸ್ತಿಯಾಯಿತು: ಶಿಯಾ ವಕ್ಫ್ ಬೋರ್ಡ್
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶಿಯಾ ವಕ್ಫ್ ಬೋರ್ಡ್ ಕೂಡ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ತ್ರಿವಳಿ ತಲಾಖ್ ಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸುವುದು ತೀರಾ ಕಠಿಣ ನಿರ್ಧಾರವಾಯಿತು ಎಂದು ಅಭಿಪ್ರಾಯಪಟ್ಟಿದೆ. ಈ ಬಗ್ಗೆ ನಿನ್ನೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ಎಐಎಂಎಂ ಮುಖಂಡ ಅಕ್ಬರುದ್ದೀನ್ ಒವೈಸಿ, ತ್ರಿವಳಿ ತಲಾಖ್ ಮಸೂದೆ ಮೂಲಕ ಕೇಂದ್ರ ಸರ್ಕಾರ ಅಲ್ಪ ಸಂಖ್ಯಾತರಿಗೆ ಕೆಟ್ಟ ಸಂದೇಶ ರವಾನೆ ಮಾಡುತ್ತಿದೆ ಎಂದು ಹೇಳಿದ್ದರು.
Comments are closed.