ರಾಷ್ಟ್ರೀಯ

ದೇವಸ್ಥಾನಗಳಲ್ಲಿ ಹೊಸ ವರ್ಷಾಚರಣೆ ಮಾಡಬೇಡಿ: ಆಂಧ್ರ ಪ್ರದೇಶ ಸರ್ಕಾರದ ಆದೇಶ

Pinterest LinkedIn Tumblr

ಅಮರಾವತಿ: ಆಂಧ್ರ ಪ್ರದೇಶದ ಧಾರ್ಮಿಕ ದತ್ತಿ ಇಲಾಖೆಯು ರಾಜ್ಯದ ದೇವಸ್ಥಾನಗಳಲ್ಲಿ ಹೊಸ ವರ್ಷ ಆಚರಿಸಿದಂತೆ ಸುತ್ತೋಲೆ ಹೊರಡಿಸಿದೆ. ಈ ಆಚರಣೆ ‘ಭಾರತೀಯ ವೇದ ಸಂಸ್ಕೃತಿ’ಯಲ್ಲ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.

ಧಾರ್ಮಿಕ ದತ್ತಿ ಇಲಾಖೆಯ ಅಂಗಸಂಸ್ಥೆಯಾಗಿರುವ ‘ಹಿಂದೂ ಧರ್ಮ ಪರಿರಕ್ಷಣಾ ಟ್ರಸ್ಟ್‌’(ಎಚ್‌ಡಿಪಿಟಿ) ಈ ಸುತ್ತೋಲೆಯನ್ನು ಇಲಾಖೆಯ ಆಯುಕ್ತೆ ವೈ.ವಿ. ಅನುರಾಧಾ ಅವರ ನಿರ್ದೇಶನದ ಮೇರೆಗೆ ಹೊರಡಿಸಿದೆ.

‘ಹಬ್ಬದ ಆಚರಣೆ ರೀತಿಯಲ್ಲಿ ಜನವರಿ 1ರಂದು ಶುಭಾಶಯಗಳನ್ನು ವಿನಿಯಮ ಮಾಡಿಕೊಳ್ಳುವುದು ಭಾರತೀಯ ವೈದಿಕ ಸಂಸ್ಕೃತಿಯಲ್ಲ. ಚೈತ್ರಮಾಸದಲ್ಲಿ ಬರುವ ಯುಗಾದಿಯೇ ಹೊಸ ವರ್ಷ ಮೊದಲ ದಿನ. ಅದರ ಆಚರಣೆಯೇ ನಮ್ಮ ಶ್ರೇಷ್ಠ ಸಂಸ್ಕೃತಿಯಾಗಿದೆ’ ಎಂದು ಎಚ್‌ಡಿಪಿಟಿ ಕಾರ್ಯದರ್ಶಿ ಸಿ. ವಿಜಯ ರಾಘವಚಾರ್ಯಲು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.

‘ದೇಶ ಸ್ವತಂತ್ರಗೊಂಡು 70 ವರ್ಷ ಕಳೆದರೂ ನಾವು ಬ್ರಿಟಿಷರು ಪರಿಚಯಿಸಿದ ಗ್ರೆಗೊರಿಯನ್‌ ಕ್ಯಾಲೆಂಡರನ್ನು ಅನುಸರಿಸುತ್ತಿದ್ದೇವೆ. ಭಾರತೀಯ ಸಂಸ್ಕೃತಿಯನ್ನು ಕಡೆಗಣಿಸಿ ಪಾಶ್ಚಾತ್ಯ ಸಂಸ್ಕೃತಿ ಅನುಸರಿಸುವ ಭರದಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ಜನವರಿ 1ರಂದು ದೇವಸ್ಥಾನಗಳನ್ನು ಅಲಂಕರಿಸುತ್ತೇವೆ. ಇದು ಸರಿ ಇಲ್ಲವೆಂದು ಇಲಾಖೆಯ ಆಯುಕ್ತರು ಅಭಿಪ್ರಾಯ ಪಟ್ಟಿದ್ದಾರೆ’ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

‘ಹಾಗಾಗಿ, ದೇವಸ್ಥಾನಗಳಿಗೆ (ಹೂ ಮತ್ತು ದೀಪಗಳಿಂದ) ವಿಶೇಷ ಅಲಂಕಾರ ಮಾಡಿ ಹಬ್ಬದ ವಾತಾವರಣ ಸೃಷ್ಟಿಸಬೇಡಿ’ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.

ಆಂಧ್ರಪ್ರದೇಶದ ದೇವಸ್ಥಾನಗಳಲ್ಲಿ ಜನವರಿ 1ರಂದು ವಿಶೇಷ ಪೂಜೆ ಮತ್ತು ದರ್ಶನದ ವ್ಯವಸ್ಥೆ ಕಲ್ಪಿಸುವ ಆಚರಣೆ ಬಹಳ ವರ್ಷಗಳಿಂದ ಸಾಮಾನ್ಯವಾಗಿ ನಡೆದುಕೊಂಡು ಬಂದಿದೆ. ಈ ದಿನದಂದು ತಿರುಮಲ, ಶ್ರೀಶೈಲ ಮತ್ತು ವಿಜಯವಾಡದ ಕನಕ ದುರ್ಗ ಮಂದಿರಕ್ಕೆ ಸಹಸ್ರಾರು ಜನ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.

ಸುತ್ತೋಲೆಯಲ್ಲಿನ ಆದೇಶ ಸ್ವಾಯತ್ತ ಸಂಸ್ಥೆಯಾಗಿರುವ ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಅನ್ವಯ ಆಗಲ್ಲ ಎಂದು ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ.

Comments are closed.