
ನವದೆಹಲಿ: ಸಚಿನ್ ತೆಂಡೂಲ್ಕರ್ ರಾಜ್ಯಸಭೆಯಲ್ಲಿ ಗುರುವಾರ ಮೊದಲ ಭಾಷಣ ಮಾಡಲು ನಡೆಸಿದ ಪ್ರಯತ್ನ ಗದ್ದಲದ ನಡುವೆ ಯಶಸ್ವಿಯಾಗಲಿಲ್ಲ. ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆ ಕೂಗಿ ಕೋಲಾಹಲ ಎಬ್ಬಿಸಿದರು.
‘ಭಾರತದಲ್ಲಿ ಕ್ರೀಡೆಯ ಭವಿಷ್ಯ’ ದ ಕುರಿತು ರಾಜ್ಯಸಭಾ ಸದಸ್ಯ ಸಚಿನ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ ಕಾಂಗ್ರೆಸಿಗರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಾಡಿದ ಆರೋಪಕ್ಕೆ ವಿರೋಧ ವ್ಯಕ್ತಪಡಿಸಿ, ಪ್ರಧಾನಿ ಕ್ಷಮೆ ಕೇಳುವಂತೆ ಒತ್ತಾಯಿಸಿದರು.
ಸಂಸತ್ತಿನ ಚಳಿಗಾಲದ ಅಧಿವೇಶನದ ನಾಲ್ಕನೇ ದಿನದ ಕಲಾಪದಲ್ಲಿಯೂ ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದ್ದರಿಂದ ಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಕಲಾಪವನ್ನು ಮಧ್ಯಾಹ್ನ 2ರವರೆಗೆ ಮುಂದೂಡಿದರು.
ಮಧ್ಯಾಹ್ನ 2:15ಕ್ಕೆ ಸಚಿನ್ ಭಾಷಣ ಪ್ರಾರಂಭಿಸುತ್ತಿದ್ದಂತೆ ಮತ್ತೆ ಗದ್ದಲ ಶುರುವಾಯಿತು.
2012ರ ಏಪ್ರಿಲ್‌ನಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಸಚಿನ್ ಸದನದಲ್ಲಿ ಅಧಿಕೃತ ವಿಷಯ ಮಂಡನೆಗೆ ಮುಂದಾಗಿದ್ದರು. ಶುಕ್ರವಾರ ಬೆಳಿಗ್ಗೆ 11ಗಂಟೆ ವರೆಗೂ ಕಲಾಪ ಮುಂದೂಡಲಾಗಿದೆ.
ಬಹು ಕೋಟಿ 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ಬೆಳಿಗ್ಗೆ ದೂರಸಂಪರ್ಕ ಇಲಾಖೆಯ ಮಾಜಿ ಸಚಿವ ಎ. ರಾಜಾ, ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಮಗಳು ಕನಿಮೋಳಿ ಸೇರಿ 17 ಆರೋಪಿಗಳನ್ನು ಖುಲಾಸೆಗೊಳಿಸಿದೆ. 2 ಜಿ ಹಗರಣ ಮುಂದಿಟ್ಟು ಪ್ರಧಾನಿ ಮೋದಿ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡಿದ್ದು, ಈ ಕುರಿತು ಪ್ರಧಾನಿ ಸ್ಪಷ್ಟನೆ ನೀಡುವಂತೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಒತ್ತಾಯಿಸಿದರು.
Comments are closed.