ರಾಷ್ಟ್ರೀಯ

‘ಭಾರತದಲ್ಲಿ ಹುಟ್ಟಿದವರೆಲ್ಲ ಹಿಂದೂಗಳಲ್ಲ, ರಾಜಕೀಯ ಪಕ್ಷಗಳಿಗೆ ರಾಮ ಮಂದಿರ ನಿರ್ಮಿಸುವ ಹಕ್ಕಿಲ್ಲ’: ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿಕೆ

Pinterest LinkedIn Tumblr

ಮಥುರಾ: ಭಾರತದಲ್ಲಿ ಹುಟ್ಟಿದವರೆಲ್ಲ ಹಿಂದೂಗಳು ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ದ್ವಾರಕಾ–ಶಾರದಾ ಪೀಠದ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ. ಭಾರತದಲ್ಲಿ ಜನಿಸಿದವರೆಲ್ಲರೂ ಹಿಂದೂಗಳು ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ವೃಂದಾವನದಲ್ಲಿ ವರದಿಗಾರರ ಜತೆ ಮಾತನಾಡಿದ ಅವರು, ‘ಭಾರತದಲ್ಲಿ ಜನಿಸಿದವರೆಲ್ಲ ಹಿಂದೂಗಳು ಎಂಬ ವಾದದಲ್ಲಿ ಯಾವುದೇ ತರ್ಕವಿಲ್ಲ. ಇದು ಸಮಾಜದ ಮೂಲ ರಚನೆಯನ್ನು ತೊಡೆದುಹಾಕಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಒಬ್ಬ ನಿಜವಾದ ಹಿಂದೂ ವೇದ ಮತ್ತು ಶಾಸ್ತ್ರಗಳಲ್ಲಿ ನಂಬಿಕೆ ಹೊಂದಿರುತ್ತಾನೆ. ಮುಸ್ಲಿಮರು ಕುರ್ ಆನ್ ಮತ್ತು ಹದಿತ್ ಓದುತ್ತಾರೆ. ಕ್ರೈಸ್ತರು ಬೈಬಲ್ ಅನುಸರಿಸುತ್ತಾರೆ’ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ತ್ರಿಪುರಾದಲ್ಲಿ ಮಾತನಾಡಿದ್ದ ಮೋಹನ್ ಭಾಗವತ್ ಅವರು, ಭಾರತದಲ್ಲಿರುವ ಮುಸ್ಲಿಮರೂ ಹಿಂದೂಗಳೇ ಎಂದು ಹೇಳಿದ್ದರು.

‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ರಾಜಕೀಯ ಪಕ್ಷಗಳಿಗೆ ಹಕ್ಕಿಲ್ಲ. ಕೇವಲ ಶಂಕರಾಚಾರ್ಯ ಪೀಠದ ಯತಿಗಳಿಗೆ ಮತ್ತು ಧರ್ಮಾಚಾರ್ಯರುಗಳಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಹಕ್ಕಿದೆ’ ಎಂದು ಸ್ವರೂಪಾನಂದ ಸರಸ್ವತಿ ಪ್ರತಿಪಾದಿಸಿದ್ದಾರೆ.

ಭಾರತವು ಜಾತ್ಯತೀತ ರಾಷ್ಟ್ರವಾಗಿರುವುದರಿಂದಲೂ ಸರ್ಕಾರ ದೇಗುಲ ನಿರ್ಮಿಸಬಾರದು ಎಂದು ಅವರು ಹೇಳಿದ್ದಾರೆ.

Comments are closed.