
ಉದಯ್ ಪುರ: ರಾಜಸ್ಥಾನದಲ್ಲಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿ ಸುಟ್ಟುಹಾಕಿದ್ದ ಪ್ರಕರಣದ ಆರೋಪಿ ಶಂಭುಲಾಲ್ ಪತ್ನಿಯ ಖಾತೆಗೆ ದೇಶದ ವಿವಿಧ ಭಾಗಗಳಿಂದ ಒಟ್ಟು 3 ಲಕ್ಷ ರೂಪಾಯಿ ವರ್ಗಾವಣೆಯಾಗಿದೆ.
ಶಂಭುಲಾಲ್ ಪಶ್ಚಿಮ ಬಂಗಾಳ ಮೂಲದ ಮುಸ್ಲಿಮ್ ವ್ಯಕ್ತಿಯನ್ನು ಹತ್ಯೆ ಮಾಡಿ ಸುಟ್ಟು ಹಾಕಿರುವ ಆರೋಪದಡಿ ಶಂಭುಲಾಲ್ ಬಂಧನಕ್ಕೊಳಗಾಗಿದ್ದಾನೆ. ಇತ್ತೀಚಿನ ಮಾಹಿತಿಯ ಪ್ರಕಾರ, ಶಂಭುಲಾಲ್ ಪತ್ನಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಖಾತೆಗೆ ದೇಶಾದ್ಯಂತ 516 ಜನರು ಒಟ್ಟು 3 ಲಕ್ಷ ರೂಪಾಯಿಗಳನ್ನು ಕಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬ್ಯಾಂಕ್ ಖಾತೆಯಿಂದ ಯಾವುದೇ ವಹಿವಾಟುಗಳು ನಡೆಯದಂತೆ ಗಮನಹರಿಸಲಾಗುತ್ತಿದ್ದು, ಖಾತೆಯ ವಹಿವಾಟುಗಳನ್ನು ನಿರ್ಬಂಧಿಸುವುದಕ್ಕೂ ಮುನ್ನವೇ 3 ಲಕ್ಷ ರೂಪಾಯಿ ಜಮೆಯಾಗಿದೆ, ಯಾರೆಲ್ಲಾ ಈ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಉದಯ್ ಪುರದ ಐಜಿ ತಿಳಿಸಿದ್ದಾರೆ.
ಇದೇ ವೇಳೆ ಉದಯ್ ಪುರದ ಸುತ್ತಮುತ್ತಲ ಪ್ರದೇಶಗಳಲ್ಲಿ ಹಿಂದೂ ಸಂಘಟನೆಗಳು ಶಂಭುಲಾಲ್ ಪರವಾಗಿ ರ್ಯಾಲಿ ನಡೆಸಲು ಉದ್ದೇಶಿಸಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸೆಕ್ಷನ್ 144 ನ್ನು ಜಾರಿಗೊಳಿಸಲಾಗಿದೆ.
Comments are closed.