
ಅಹಮದಾಬಾದ್: ಬಿಜೆಪಿಯ ಭದ್ರ ಕೋಟೆ ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದಕ್ಕಿಂತ ಮುಂಚೆ ಪ್ರತಿನಿಧಿಸುತ್ತಿದ್ದ ಮಣಿನಗರ ವಿಧಾನಸಭಾ ಕ್ಷೇತ್ರ ಈ ಬಾರಿ ತೀವ್ರ ಕುತೂಹಲ ಮೂಡಿಸಿದ್ದು, ಆಡಳಿತರೂಢ ಬಿಜೆಪಿಯ ಹಾಲಿ ಶಾಸಕ ಹಾಗೂ ಪ್ರಧಾನಿ ಪಕ್ಕಾ ಶಿಷ್ಯ ಸುರೇಶ್ ಪಟೇಲ್ ಮತ್ತು ಕಾಂಗ್ರೆಸ್ ನ ಐಐಎಂ ಪದವೀಧರೆ ಶ್ವೇತಾ ಬ್ರಹ್ಮಭಟ್ ನಡುವೆ ತೀವ್ರ ಪೈಪೋಟಿ ನಡೆದಿದೆ.
ಬೆಂಗಳೂರು ಐಐಎಂ ಮತ್ತು ಲಂಡನ್ ನಲ್ಲಿ ಪದವಿ ಪಡೆದ 34 ವರ್ಷದ ಶ್ವೇತಾ ಬ್ರಹ್ಮಭಟ್ ಈಗ ಮಣಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದು ಹಲವರಿಗೆ ಅಚ್ಚರಿ ಮೂಡಿಸಿದ್ದು, ಸ್ಪರ್ಧೆ ತೀವ್ರವಾಗುವುದಕ್ಕೆ ಕಾರಣವಾಗಿದೆ. ಆದರೂ ಇಲ್ಲಿ ಕಾಂಗ್ರೆಸ್ ಗೆಲ್ಲುವುದು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ.
ಮಣಿನಗರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರ ಕಚೇರಿಯಾಗಿದ್ದು, ವ್ಯಾಪಾರಿಗಳೇ ತುಂಬಿರುವ ಈ ಕ್ಷೇತ್ರದಿಂದ ಮೋದಿ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮೋದಿ ಕ್ಷೇತ್ರವಾಗಿರುವುದರಿಂದ ಹಾಗೂ ಅಹಮದಾಬಾದ್ ನ 16 ಕ್ಷೇತ್ರಗಳ ಪೈಕಿ ಶ್ವೇತಾ ಅವರು ಒಬ್ಬರೇ ಮಹಿಳಾ ಅಭ್ಯರ್ಥಿಯಾಗಿರುವುದರಿಂದಲೂ ಇದು ಕುತೂಹಲಕಾರಿ ಕ್ಷೇತ್ರವಾಗಿದೆ.
ನೋಟ್ ನಿಷೇಧ ಹಾಗೂ ಜಿಎಸ್ ಟಿ ಜಾರಿಗೊಂಡ ನಂತರ ಮೋದಿ ಕ್ಷೇತ್ರದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಜಿಎಸ್ ಟಿ ಜಾರಿಗೆ ಬಂದ ನಂತರ ಇಲ್ಲಿನ ವ್ಯಾಪಾರಿಗಳು ಸಾಕಷ್ಟು ನಷ್ಟ ಅನುಭವಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ನೋಟ್ ನಿಷೇಧ ಸಹ ಸಾಕಷ್ಟು ಪೆಟ್ಟು ನೀಡಿದೆ. ಹೀಗಾಗಿ ಬಿಜೆಪಿಗೂ ಇದು ಸವಾಲಿನ ಕ್ಷೇತ್ರವಾಗಿ ಪರಿಣಿಮಿಸಿದೆ.
ಕಾಂಗ್ರೆಸ್ ನಾಯಕ ನರೇಶ್ ಬ್ರಹ್ಮಭಟ್ ಅವರ ಪುತ್ರಿಯಾಗಿರುವ ಶ್ವೇತಾ ಅವರು ಲಂಡನ್ ವೆಸ್ಟ್ ಮಿನಸ್ಟರ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಈಗ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶ್ವೇತಾ ಅವರು, ನಾನು ರಾಜಕೀಯವನ್ನು ಬಹಳ ದಿನಗಳಿಂದಲೂ ನೋಡುತ್ತಿದ್ದೇನೆ. ರಾಜಕೀಯ ಒಂದು ಸಾಮಾಜಿಕ ಕಾರ್ಯ ಎಂದು ಪರಿಗಣಿಸಿದ್ದೇನೆ. ವ್ಯಾಪಾರ ಅಥವಾ ಉದ್ಯಮ ನನ್ನ ಕ್ಷೇತ್ರವಾಗಿರಲಿಲ್ಲ. ಆದರೆ ನಾನು ವಿಶ್ವದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಲ್ಲಿ ಪದವಿ ಪಡೆದುಕೊಂಡ ನಂತರವೂ ನನಗೆ ಅಗತ್ಯವಾದ ಹಣಕಾಸಿನ ಸೌಲಭ್ಯ ಸಿಗಲಿಲ್ಲ. ನನ್ನಂತವರಿಗೆ ಹೀಗಾದರೇ ಇನ್ನು ಜನ ಸಾಮಾನ್ಯರ ಗತಿ ಏನು? ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯರಿಗೆ ಮತ್ತು ಯುವಕರಿಗೆ ಧ್ವನಿಯಾಗಬೇಕು ಎಂಬ ಉದ್ದೇಶದಿಂದ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಶ್ವೇತಾ ಹೇಳಿದ್ದಾರೆ.
Comments are closed.