
ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿದೆ ಎನ್ನುವ ಪ್ರಧಾನಿ ಮೋದಿ ಆರೋಪಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ವಿನಾಕಾರಣ ಭಾರತ ಚುನಾವಣೆಯಲ್ಲಿ ನಮ್ಮನ್ನು ಎಳೆಯುವುದನ್ನು ನಿಲ್ಲಿಸಿ, ನಿಮ್ಮ ಸ್ವಸಾಮರ್ಥ್ಯದಿಂದ ಚುನಾವಣೆಯಲ್ಲಿ ಗೆಲುವು ಪಡೆಯಿರಿ ಎಂದು ಪ್ರತಿಕ್ರಿಯಿಸಿದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಟ್ವೀಟ್ ಮಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಮಹ್ಮದ್ ಫೈಸಲ್, ಭಾರತ ಚುನಾವಣೆಯಲ್ಲಿ ಪಾಕಿಸ್ತಾನವನ್ನು ವಿನಾಕಾರಣ ಎಳೆದು ತರುವುದನ್ನು ನಿಲ್ಲಿಸಿ, ಸ್ವಸಾಮರ್ಥ್ಯದ ಮೇಲೆ ಚುನಾವಣೆಯಲ್ಲಿ ಗೆಲುವು ಪಡೆಯಿರಿ. ಪಾಕಿಸ್ತಾನದ ವಿರುದ್ಧ ಬೇಜವಾಬ್ದಾರಿಯತ ಹಾಗೂ ಆಧಾರವಿಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಗುಜರಾತ್ ವಿಧಾನ ಸಭೆ ಚುನಾವಣೆ ಎರಡನೇ ಹಂತದ ಪ್ರಚಾರ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ ಮೋದಿ, ಗುಜರಾತ್ ಚುನಾವಣೆಯಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿದೆ. ಕಾಂಗ್ರೆಸ್ನ ಹಿರಿಯ ಮುಖಂಡರು ಪಾಕಿಸ್ತಾನದ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಈ ಕುರಿತು ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದರು.
ಪ್ರಚಾರದ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಹ್ಮದ್ ಪಟೇಲ್ ಗುಜರಾತ್ನ ಸಿಎಂ ಆಗಬೇಕು ಎಂದು ಪಾಕಿಸ್ತಾನ ಸೇನೆಯ ಮಾಜಿ ಮಹಾ ನಿರ್ದೇಶಕ ಸರ್ದಾರ್ ಅರ್ಷದ್ ರಫೀಕ್ ಹೇಳಿದ್ದಾರೆ ಎಂಬ ವರದಿಯನ್ನು ಮೋದಿ ಪ್ರಸ್ತಾಪಿಸಿದ್ದರು.
ಅಲ್ಲದೇ ಪಾಕಿಸ್ತಾನದ ಮುಖಂಡರ ಜೊತೆಗಿನ ಮಾತುಕತೆಯ ನಂತರ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರು ತಮ್ಮನ್ನು `ನೀಚ’ ಎಂದು ಕರೆದರು. ಈ ಕುರಿತು ಮಾಧ್ಯಮಗಳು ವರದಿಯನ್ನು ಪ್ರಸಾರ ಮಾಡಿದೆ. ಕಾಂಗ್ರೆಸ್ ಮಣಿಶಂಕರ್ ಅಯ್ಯರ್ ಅವರ ಮನೆಯಲ್ಲಿ ಸಭೆ ಸೇರಲಾಗಿದ್ದು, ಈ ಸಭೆಯಲ್ಲಿ ಪಾಕಿಸ್ತಾನ ಮಾಜಿ ವಿದೇಶಾಂಗ ಸಚಿವ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾಗವಹಿಸಿದ್ದರು ಎಂಬ ಆರೋಪಿಸಿದ್ದರು.
Comments are closed.